2027ಕ್ಕೆ ಕಾಳೇನ ಅಗ್ರಹಾರ ಮತ್ತು ನಾಗವಾರ ಸಂಪರ್ಕಿಸುವ ಮೆಟ್ರೋ ಗುಲಾಬಿ ಮಾರ್ಗ ಸಂಪೂರ್ಣ ಸೇವೆಗೆ

| Published : Nov 14 2024, 01:32 AM IST / Updated: Nov 14 2024, 08:54 AM IST

ಸಾರಾಂಶ

ಕಾಳೇನ ಅಗ್ರಹಾರ ಮತ್ತು ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ರೈಲ್ವೆ ಸೇವೆ ಆರಂಭ 1 ವರ್ಷ ಮುಂದಕ್ಕೆ ಹೋಗಿದ್ದು, 2025ರ ಬದಲಾಗಿ 2026ರ ಡಿಸೆಂಬರ್‌ಗೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಯೋಜಿಸಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ಕಾಳೇನ ಅಗ್ರಹಾರ ಮತ್ತು ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ರೈಲ್ವೆ ಸೇವೆ ಆರಂಭ 1 ವರ್ಷ ಮುಂದಕ್ಕೆ ಹೋಗಿದ್ದು, 2025ರ ಬದಲಾಗಿ 2026ರ ಡಿಸೆಂಬರ್‌ಗೆ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಯೋಜಿಸಿದೆ.

ಒಟ್ಟೂ 21.26 ಕಿಮೀ ಇರುವ ಈ ಮಾರ್ಗ ಎರಡು ಹಂತದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗುವ ಸಾಧ್ಯತೆಯಿದೆ. ಮೊದಲ ಹಂತವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎತ್ತರಿಸಿದ ಮಾರ್ಗ (7.5ಕಿಮೀ) 2025ರ ಡಿಸೆಂಬರ್‌ಗೆ ಹಾಗೂ ಎರಡನೇ ಹಂತವಾಗಿ ಡೇರಿ ಸರ್ಕಲ್‌ನಿಂದ ನಾಗವಾರದವರೆಗೆ ಸುರಂಗ ಮಾರ್ಗ (13.76ಕಿಮೀ) 2026ರ ಡಿಸೆಂಬರ್‌ಗೆ ಪೂರ್ಣ ಮಾರ್ಗ ಆರಂಭಿಸುವ ಬಗ್ಗೆ ಯೋಜಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ 31ರಂದು ಸುರಂಗ ಕೊರೆಯುವ 9ನೇ ಟಿಬಿಎಂ ಭದ್ರಾ ಯಂತ್ರ ತನ್ನ ಕಾರ್ಯವನ್ನು ಮುಗಿಸುವ ಮೂಲಕ ಈ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಪೂರ್ಣಗೊಂಡಿದೆ. ಹಳಿ ಅಳವಡಿಕೆ ಕಾರ್ಯ ನಡೆಯುತ್ತಿದ್ದು, 2025ರ ಅಕ್ಟೋಬರ್‌ ವೇಳೆಗೆ ಈ ಕೆಲಸ ನಡೆಯಲಿದೆ. ಗುಲಾಬಿ ಮಾರ್ಗ ಒಳಗೊಂಡು ನಮ್ಮ ಮೆಟ್ರೋ 2ನೇ ಹಂತಕ್ಕಾಗಿ ಹಳಿ ಜೋಡಣೆಯ ಹೊಣೆ ಹೊತ್ತಿರುವ ಟೆಕ್ಸ್‌ಮ್ಯಾಕೋ ರೈಲ್ ಅಂಡ್ ಎಂಜಿನಿಯರಿಂಗ್ ಲಿಮಿಟೆಡ್ ₹ 521.76 ಕೋಟಿ ಗುತ್ತಿಗೆ ಪಡೆದಿದೆ.

ಎಂ.ಜಿ.ರಸ್ತೆ, ಶಿವಾಜಿನಗರದ ಬಳಿ ಟ್ರ್ಯಾಕ್‌ ಅಳವಡಿಕೆ ಮುಗಿದಿದೆ. ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ (ವೆಲ್ಲಾರ ಜಂಕ್ಷನ್‌) ನಿಂದ ಕಂಟೋನ್ಮೆಂಟ್‌ನ ಬಂಬೂ ಬಜಾರ್‌ ಸ್ಟೇಷನ್‌ವರೆಗೆ ಬಲ್ಲಾಸ್ಟ್‌ಲೆಸ್ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಡೇರಿ ಸರ್ಕಲ್ ಮತ್ತು ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣಗಳ ನಡುವೆ ಹಳಿ ಜೋಡಣಾ ಕೆಲಸ ನಡೆಯುತ್ತಿದೆ.

ಮುಂದುವರಿದು ಟ್ರಾಕ್ಷನ್‌ ಹಾಗೂ ಸಿಗ್ನಲಿಂಗ್‌ ಕೆಲಸಕ್ಕೆ 6 ರಿಂದ 8 ತಿಂಗಳು ಹಿಡಿಯುವ ಸಾಧ್ಯತೆಯಿದೆ. ಬಳಿಕ 4 ತಿಂಗಳು ಪ್ರಾಯೋಗಿಕ ಸಂಚಾರ ನಡೆಯಲಿದೆ. ಸುರಂಗ ಮಾರ್ಗದ ಕಾಮಗಾರಿಯಿಂದಾಗಿಯೇ ಒಟ್ಟಾರೆ ಗುಲಾಬಿ ಮಾರ್ಗದ ಕಾರ್ಯಾಚರಣೆ ಆರಂಭ 1 ವರ್ಷ ಮುಂದಕ್ಕೆ ಹೋಗಿದೆ. ಈ ಮಾರ್ಗದಲ್ಲಿ 18 ನಿಲ್ದಾಣಗಳು ನಿರ್ಮಾಣ ಕಾರ್ಯ ಶೇ. 90 ರಷ್ಟು ಮುಗಿದಿದೆ. ಆದರೆ, ರ್ಯಾಂಪ್‌ ಸೇರಿ ಇತರೆ ಕಾಮಗಾರಿ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಈ ಮಾರ್ಗದಲ್ಲಿ 16 ಚಾಲಕ ರಹಿತ ರೈಲುಗಳನ್ನು ಬೆಂಗಳೂರಿನಲ್ಲೇ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ ತಯಾರಿಸುತ್ತಿದೆ. ಜೂನ್ 2025ರ ವೇಳೆಗೆ ಮೊದಲ ರೈಲನ್ನು ಪೂರೈಸುವ ಸಾಧ್ಯತೆಯಿದೆ. ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

ಇನ್ನು ಎಲ್‌ಸ್ಟೋಮ್‌ ಕಂಪನಿಯು ಇಲ್ಲಿ ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್‌ ಸಿಗ್ನಲಿಂಗ್‌ ಸಿಸ್ಟಂ) ಸಿಗ್ನಲಿಂಗ್‌ ಅಳವಡಿಸಲಿದೆ. ಗುಲಾಬಿ ಮಾರ್ಗದ ಜೊತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದಲ್ಲೂ ಕೂಡ ಇದೇ ಕಂಪನಿ ಸಿಗ್ನಲಿಂಗ್‌ ವ್ಯವಸ್ಥೆ ಮಾಡಲಿದೆ. ಜೊತೆಗೆ ಗುಲಾಬಿ ಮಾರ್ಗದ 12 ಭೂಗತ ನಿಲ್ದಾಣ ಹಾಗೂ 6 ಎತ್ತರಿಸಿದ ಮಾರ್ಗದಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋಡ್‌ ( ಪಿಎಸ್‌ಡಿ) ಅಳವಡಿಕೆ ಆಗಲಿದೆ.

ಗುಲಾಬಿ ಮಾರ್ಗದಲ್ಲಿ ಸುರಂಗ ಕಾಮಗಾರಿಯೇ ಅತ್ಯಂತ ಸವಾಲಿನಿಂದ ಕೂಡಿತ್ತು. ಇದು ಬೆಂಗಳೂರು ಮೆಟ್ರೋ ಯೋಜನೆಯ ಈವರೆಗೆನ ಅತೀ ಉದ್ದದ ಸುರಂಗ ಮಾರ್ಗವಾಗಿದೆ. ಟಿಬಿಎಂ ಯಂತ್ರಗಳು ಹಲವೆಡೆ ಸಿಲುಕಿದ್ದರಿಂದಲೂ ಕಾಮಗಾರಿ ವಿಳಂಬವಾಗಿತ್ತು.