ಸಾರಾಂಶ
ಬೆಂಗಳೂರು : ಮೆಟ್ರೋ ರೈಲು ಪ್ರಯಾಣ ದರವನ್ನು ಪರಿಷ್ಕರಿಸುವ ಸಲುವಾಗಿ ನಮ್ಮ ಮೆಟ್ರೋ ನಿಗಮವು ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲು ಮುಂದಾಗಿದೆ. ಅ.21ರ ಒಳಗಾಗಿ ಸಲಹೆ ನೀಡುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ದರ ಹೆಚ್ಚಿಸಲು ಮತ್ತು ಇಳಿಸಲು ನಿಗಮವು ರೈಲು ದರ ನಿಗದಿ ಸಮಿತಿ ರಚಿಸಿದೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2022ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇದು ಸ್ವತಂತ್ರ ಸಮಿತಿಯಾಗಿದ್ದು, ದರ ಪರಿಷ್ಕರಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ. ಸಾರ್ವಜನಿಕರ ಸಲಹೆ ಆಲಿಸುವ ಜೊತೆಗೆ ಮೆಟ್ರೋ ರೈಲು ಸೇವೆಯ ಖರ್ಚು, ವೆಚ್ಚ, ಆದಾಯ ಮುಂತಾದ ಅಂಶಗಳನ್ನು ಪರಿಗಣಿಸಿ ದರವನ್ನು ಈ ಸಮಿತಿ ನಿಗದಿಪಡಿಸಲಿದೆ.
ಸಮಿತಿಯು ಮೆಟ್ರೋ ರೈಲು ಪ್ರಯಾಣ ದರ ಪರಿಷ್ಕರಣೆಗೆ ಮುನ್ನ ಎಷ್ಟು ಪ್ರಮಾಣದಲ್ಲಿ ದರ ಪರಿಷ್ಕರಿಸಬೇಕು ಎಂಬ ಕುರಿತು ಸಾರ್ವಜನಿಕರಿಂದ ಸಲಹೆ ನೀಡುವಂತೆ ಸಮಿತಿ ಕೋರಿದೆ. ಅದಕ್ಕಾಗಿ ಪ್ರಯಾಣಿಕರು ffc@bmrc.co.inಗೆ ಅ.21ರೊಳಗೆ ಜನರು ಸಲಹೆಯನ್ನು ಕಳುಹಿಸುವಂತೆ ಸಮಿತಿ ಕೋರಿದೆ.