ಮಹಿಳೆಯರಿಗೆ ₹1 ಲಕ್ಷದವರೆಗೆ ಕಿರುಸಾಲ ಸೌಲಭ್ಯ: ಜಿ. ಪದ್ಮಾವತಿ

| Published : Jul 23 2025, 04:31 AM IST

ಮಹಿಳೆಯರಿಗೆ ₹1 ಲಕ್ಷದವರೆಗೆ ಕಿರುಸಾಲ ಸೌಲಭ್ಯ: ಜಿ. ಪದ್ಮಾವತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಶೀಘ್ರದಲ್ಲಿಯೇ ₹1 ಲಕ್ಷವರೆಗೆ ಕಿರು ಸಾಲಸೌಲಭ್ಯ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ. ಪದ್ಮಾವತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಶೀಘ್ರದಲ್ಲಿಯೇ ₹1 ಲಕ್ಷವರೆಗೆ ಕಿರು ಸಾಲಸೌಲಭ್ಯ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಜಿ. ಪದ್ಮಾವತಿ ಹೇಳಿದರು.

ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ₹1ಲಕ್ಷ ಕಿರುಸಾಲ ಯೋಜನೆಯಿಂದ ಮಹಿಳೆಯರು ಮತ್ತಷ್ಟು ಆರ್ಥಿಕವಾಗಿ ಸಬರಾಗಲು ಅನುಕೂಲವಾಗಲಿದೆ. ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಅಧಿಕಾರಿ ವರ್ಗದ ಆಸಕ್ತಿ ಮತ್ತು ಕಾಳಜಿ ಸಕರಾತ್ಮಕವಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು.

ಮಹಿಳೆಯರ ಸ್ವಾವಲಂಬಿ ಬದುಕು ನಡೆಸಲು ಸರ್ಕಾರ ಹಲವು ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇವದಾಸಿ ಪುನರ್ವಸತಿ ಯೋಜನೆಯಡಿ, ದೇವದಾಸಿಯರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನ ಸರ್ಕಾರ ನೀಡುತ್ತಿದೆ. ಮಾಜಿ ದೇವದಾಸಿಯರಿಗೆ ನೀಡುವ ಮಾಸಿಕ ಪಿಂಚಣಿ ಮೊತ್ತವನ್ನು ₹1500 ರಿಂದ ₹2 ಸಾವಿರವರೆಗೆ ಹೆಚ್ಚಿಸಲಾಗಿದೆ. ಹಾಗೆಯೇ ದೇವದಾಸಿಯರ ಸಮಗ್ರ ಸಮೀಕ್ಷೆಯನ್ನು ಸರ್ಕಾರ ಕೈಗೊಳ್ಳುತ್ತಿದ್ದು, ಇದರಿಂದ ವಂಚಿತ ದೇವದಾಸಿಯರಿಗೂ ಸರ್ಕಾರದ ಯೋಜನೆಗಳು ತಲುಪಿಸುವ ಕಾರ್ಯ ಆಗಲಿದೆ ಎಂದು ಹೇಳಿದರು.

ಸಂಬಂಧಪಟ್ಟ ಸಮೀಕ್ಷೆಯಲ್ಲಿ ದೇವದಾಸಿಯರು ಮತ್ತು ತೃತೀಯ ಲಿಂಗಿಗಳು ಯಾವುದೇ ಹಿಂಜರಿಕೆ ಇಲ್ಲದೆ ಹೆಸರನ್ನು ನೋಂದಾಯಿಸಬೇಕು. ಅಂದಾಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಸಮೀಕ್ಷೆಗಳಿಂದ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ್ ಹೂಗಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಸಾಕಷ್ಟಿದ್ದು, ನೀವಷ್ಟೇ ಯೋಜನೆಗಳನ್ನು ಪಡೆಯದೇ ಇತರರಿಗೂ ಅದರ ಮಾಹಿತಿ ಹಂಚಬೇಕು. ಸೂಕ್ತ ದಾಖಲೆ ಸಹಿತ ನೀವು ಒಂದು ಹೆಜ್ಜೆ ಮುಂದಿಟ್ಟರೆ ನಾವೂ ಕೂಡ ಒಂದು ಹೆಜ್ಜೆ ಮುಂದೆ ಬಂದು ನಿಮಗೆ ಸಾಲ ಕೊಡುತ್ತೇವೆ ಎಂದರು. ಉದ್ಯೋಗಿನಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಮಲತಾ ಹಿರೇಮನಿ, ಮಂಜುನಾಥ್ ಪರಸನ್ನವರ ಮತ್ತು ಎಲ್ಲ ತಾಲೂಕು ಸಿಡಿಪಿಒಗಳು ಇತರರು ಉಪಸ್ಥಿತರಿದ್ದರು.

ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ:

ಅಧಿಕಾರ ನಂತರ 13 ಜಿಲ್ಲೆಗಳ ಪ್ರವಾಸ ಕೈಗೊಂಡು, ಯೂನಿಟ್ ಗಳಿಗೆ ಭೇಟಿ ನೀಡಿದ್ದು, ಉತ್ತರ ಕರ್ನಾಟಕದ ಅದರಲ್ಲೂ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಪ್ರಗತಿ ಉತ್ತಮವಾಗಿದ್ದು, ಇದಕ್ಕೆ ಇಲ್ಲಿನ ಸಿಇಒ ಇಂದ ಕೆಳಮಟ್ಟದ ಅಧಿಕಾರಿಗಳವರೆಗೂ ಅವರಿಗೆ ಜನಪರ ಹಿತಾಸಕ್ತಿಯೇ ಕಾರಣ. ಆದ್ದರಿಂದ ಈ ಭಾಗಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಗುರಿ ನೀಡಿ ಅನುಕೂಲ ಮಾಡಿಕೊಡುತೇನೆ ಎಂದು ಜಿ ಪದ್ಮಾವತಿ ಅವರು ಭರವಸೆ ನೀಡಿದರು.