ಪದವಿ ಕಾಲೇಜಿನ ಕಂಪೌಂಡ್‌ಗೆ ಹಾನಿ; ಎಬಿವಿಪಿ ಪ್ರತಿಭಟನೆ

| Published : Feb 13 2024, 12:46 AM IST

ಸಾರಾಂಶ

ಕಾಲೇಜಿನ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಅಲ್ಲದೆ ಕಂಪೌಂಡ್‌ ಗೋಡೆ ಒಡೆದಿದ್ದರಿಂದ ರಕ್ಷಣೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ತಾಲೂಕಿನ ನೌಬಾದ ಗ್ರಾಮದ ಸರ್ವೇ ನಂ.18/2 ಮತ್ತು 18/3 ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್‌ (ನೌಬಾದ) ಕಾಲೇಜಿನ ಇತಿಹಾಸ ವಿಭಾಗದ ಕಂಪೌಂಡ್‌ ಗೋಡೆಯನ್ನು ಕಾಲೇಜಿನ ಪಕ್ಕದ ಕೆಲ ಜಮೀನುದಾರರು ಒಡೆದು ಅತಿಕ್ರಮಣ ಪ್ರವೇಶ ಮಾಡಿ ಕಾಲೇಜಿನ ಆಸ್ತಿಗೆ ನಷ್ಟವನ್ನುಂಟು ಮಾಡಿರುತ್ತಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಆರೋಪಿಸಿದೆ.

ಈ ಕುರಿತು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಅಲ್ಲದೆ ಕಂಪೌಂಡ್‌ ಗೋಡೆ ಒಡೆದಿದ್ದರಿಂದ ರಕ್ಷಣೆ ಇಲ್ಲದಂತಾಗಿದೆ. ತಾವುಗಳು ಈ ಬಗ್ಗೆ ಸದರಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಘಟಕ ಕೋರಿದೆ.

ಒಂದು ವೇಳೆ ಗೋಡೆ ಒಡೆದವರ ಮೇಲೆ ಕ್ರಮ ಜರುಗಿಸಲು ವಿಳಂಬ ಮಾಡಿದ್ದೆಯಾದಲ್ಲಿ ಕಾಲೇಜಿನ ಎದುರುಗಡೆ ಬೀದರ್‌ - ಉದಗೀರ ಮುಖ್ಯ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪವನ್ ಕುಂಬಾರ್, ಅಂಬರೀಶ ಬಿರಾದರ್, ಸುಜಾತ ಸಾವಿತ್ರಿ, ಪೂಜಾ ಹಾಗೂ ರಾಜೇಶ್ವರಿ ಸೇರಿ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.