ಸಾರಾಂಶ
ಶಿರಸಿ-ಸಿದ್ದಾಪುರದಲ್ಲಿ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ, ಕೆಂಗ್ರೆ, ಮಾರಿಗದ್ದೆ ನೀರು ಕೆಲವೇ ದಿನಗಳಲ್ಲಿ ಬತ್ತಲಿದೆ. ನಗರದಲ್ಲಿ ಜಲ ಜಾಗೃತಿ ಮೂಡಿಸಬೇಕು. ನೀರನ್ನು ಮಿತವಾಗಿ ಬಳಸಲು ಈಗಿನಿಂದಲೇ ಸೂಚಿಸಬೇಕು
ಶಿರಸಿ:
ನಗರಸಭೆಯಲ್ಲಿ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ. ಹಣ ಇದ್ದವರು ಹಾಗೂ ಮಧ್ಯವರ್ತಿಗಳ ಹಾವಳಿ ಜೋರಾಗಿದೆ ಎಂದು ಸಾರ್ವಜನಿಕ ದೂರುಗಳು ಬರುತ್ತಿವೆ. ಆದರೆ, ಇನ್ಮುಂದೆ ಹೀಗಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಖಡಕ್ ಎಚ್ಚರಿಕೆ ನೀಡಿದರು.ನಗರಸಭೆಯಲ್ಲಿ ಶನಿವಾರ ಮಾರಿಕಾಂಬಾ ಜಾತ್ರಾ ಪೂರ್ವ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಯಾವುದೇ ಕಾರಣಕ್ಕೂ ಇನ್ಮುಂದೆ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಮಧ್ಯವರ್ತಿಗಳು ಕೆಲಸ ಮಾಡಿಕೊಡುತ್ತಿರುವುದು ಗಮನಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ. ನಾನು ಇನ್ನು ಯಾರ ಕೆಲಸ ಆಗುತ್ತಿದೆ, ಯಾರದ್ದು ಆಗಿಲ್ಲ ಎಂಬುದರ ದಾಖಲೆ ಸಹಿತ ಬಂದು ಹಿಡಿಯುತ್ತೇನೆ. ನಗರಸಭೆ ಸದಸ್ಯರು ಸಹ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.ಕಚೇರಿಗೆ ಬಂದವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಡಿ, ನಗರಸಭೆಯ ಗೌರವ ಕಾಪಾಡಿ ಎಂದು ಸೂಚಿಸಿದರು. ಜಾತ್ರೆಯನ್ನು ಈ ವರ್ಷ ಅಚ್ಚುಕಟ್ಠಾಗಿ ಮಾಡಬೇಕು. ಜಾತ್ರಾ ಪ್ರದೇಶ, ಪಾರ್ಕಿಂಗ್ ಪ್ರದೇಶದಲ್ಲಿ ಚರಂಡಿಗಳನ್ನು ಕಲ್ಲು ಮುಚ್ಚುವ ಮೂಲಕ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ವರ್ಷ ನೀರಿನ ಬರಗಾಲ ಆಗಲಿದೆ. ಶಿರಸಿ-ಸಿದ್ದಾಪುರದಲ್ಲಿ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ, ಕೆಂಗ್ರೆ, ಮಾರಿಗದ್ದೆ ನೀರು ಕೆಲವೇ ದಿನಗಳಲ್ಲಿ ಬತ್ತಲಿದೆ. ನಗರದಲ್ಲಿ ಜಲ ಜಾಗೃತಿ ಮೂಡಿಸಬೇಕು. ನೀರನ್ನು ಮಿತವಾಗಿ ಬಳಸಲು ಈಗಿನಿಂದಲೇ ಸೂಚಿಸಬೇಕು. ಬೋರ್‌ವೆಲ್ ಎಲ್ಲೆಲ್ಲಿ ಇದೆ ಅದನ್ನು ಸರಿಪಡಿಸಬೇಕು. ಸ್ಥಳೀಯ ಬೋರ್‌ವೆಲ್ ಮೂಲಕವೇ ಓವರ್ ಹೆಡ್ ಟ್ಯಾಂಕ್ ತುಂಬಿಸುವ ಯೋಜನೆ ಹಾಕಿಕೊಳ್ಳಿ ಎಂದು ಭೀಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.ಬರಗಾಲದ ಹಣದಲ್ಲಿ ಹೊಸ ಬೋರ್‌ವೆಲ್ ತೆಗೆಸಲು ಅವಕಾಶವಿಲ್ಲ. ಇರುವ ಬೋರ್‌ವೆಲ್ ಸರಿಪಡಿಸಲು ಸೂಚಿಸಲಾಗಿದೆ. ಈಗಾಗಲೇ ₹ ೫೬ ಲಕ್ಷದಲ್ಲಿ ೧೫ ಬೋರ್‌ವೆಲ್ ಕೊರೆಯಲು ನಗರಸಭೆ ನಿರ್ಧರಿಸಿದೆ. ಅಗತ್ಯ ಇರುವಲ್ಲಿ ಬೋರ್‌ವೆಲ್ ಹೊಡೆಸಲು ಅನುದಾನದ ಕೊರತೆ ಆದರೆ, ನನ್ನ ಅನುದಾನದಲ್ಲಿ ನೀಡುತ್ತೇನೆ, ಜನರು ನೀರಿನ ಕೊರತೆ ಎದುರಿಸುವಂತಾಗಬಾರದು ಎಂದರು.ಶೌಚಾಲಯಗಳನ್ನು ಕೇವಲ ಜಾತ್ರೆಗಾಗಿ ಸ್ವಚ್ಛಗೊಳಿಸುವಂತಾಗಿದೆ. ಉಳಿದ ದಿನಗಳಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಸದಸ್ಯರು, ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣ, ಪೌರಾಯುಕ್ತ ಕಾಂತರಾಜು ಇತರರಿದ್ದರು.₹85 ಲಕ್ಷ ಯೋಜನೆ:ಜಾತ್ರೆಯ ವೇಳೆ ಟ್ರಾಫಿಕ್ ನಿರ್ವಹಣೆ, ಸಿಸಿ ಕ್ಯಾಮರಾ ಅಳವಡಿಕೆ, ನೀರಿನ ಬವಣೆ ತಪ್ಪಿಸುವಿಕೆ, ಸಂಚಾರ ದಟ್ಟಣಿ ತಪ್ಪಿಸುವಿಕೆ ಸೇರಿದಂತೆ ನಗರಸಭೆ 23 ಅಂಶಗಳ ಯೋಜನೆ ಹಾಕಿಕೊಂಡಿದೆ. ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಶಿರಸಿ ಮಾರಿಕಾಂಬಾ ಜಾತ್ರೆಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳಲ್ಲಿ ಈಗಾಗಲೇ ವಿನಂತಿಸಿಕೊಂಡಿದ್ದೇನೆ. ಇನ್ನೊಮ್ಮೆ ಭೇಟಿಯಾಗಿ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ತರಲಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.