ಒಂದೆಡೆ ತ್ರಿವರ್ಣ ಧ್ವಜಗಳ ಕಲರವ, ಮತ್ತೊಂದೆಡೆ ದೇಶಭಕ್ತಿ ಗೀತೆಗಳ ಸದ್ದು, ವೇದಿಕೆಯಲ್ಲಿ ಮೈನವಿರೇಳಿಸುವ ನೃತ್ಯರೂಪಕಗಳು. ಮಧ್ಯೆ ಮಧ್ಯೆ ಮೊಳಗಿದ ‘ಭಾರತ್ ಮಾತಾ ಕೀ ಜೈ’ ಘೋಷಣೆ… ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರ ನೆನಪುಗಳು ಕಣ್ಣಮುಂದೆ ಬಂದಂತೆ ಭಾಸವಾದ ಕ್ಷಣಗಳು… ದೇಶಕ್ಕಾಗಿ ಬಲಿದಾನಗೈದ ಲಕ್ಷಾಂತರ ಮಹನೀಯರಿಗೆ ಗೌರವ ಸಲ್ಲಿಸಿದ ಸಾವಿರಾರು ಹೃದಯಗಳು..
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಂದೆಡೆ ತ್ರಿವರ್ಣ ಧ್ವಜಗಳ ಕಲರವ, ಮತ್ತೊಂದೆಡೆ ದೇಶಭಕ್ತಿ ಗೀತೆಗಳ ಸದ್ದು, ವೇದಿಕೆಯಲ್ಲಿ ಮೈನವಿರೇಳಿಸುವ ನೃತ್ಯರೂಪಕಗಳು. ಮಧ್ಯೆ ಮಧ್ಯೆ ಮೊಳಗಿದ ‘ಭಾರತ್ ಮಾತಾ ಕೀ ಜೈ’ ಘೋಷಣೆ… ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರ ನೆನಪುಗಳು ಕಣ್ಣಮುಂದೆ ಬಂದಂತೆ ಭಾಸವಾದ ಕ್ಷಣಗಳು… ದೇಶಕ್ಕಾಗಿ ಬಲಿದಾನಗೈದ ಲಕ್ಷಾಂತರ ಮಹನೀಯರಿಗೆ ಗೌರವ ಸಲ್ಲಿಸಿದ ಸಾವಿರಾರು ಹೃದಯಗಳು..ನಗರದ ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ಆ.14ರ ಮಧ್ಯರಾತ್ರಿ 12 ಗಂಟೆವರೆಗೆ ನೆರೆದಿದ್ದ ಸಹಸ್ರಾರು ದೇಶಪ್ರೇಮಿಗಳ ಕಣ್ಣುಗಳಲ್ಲಿ ಸ್ವಾತಂತ್ರ್ಯದ ನವಚೈತನ್ಯದ ತೇಜಸ್ಸು ಕಂಗೊಳಿಸುತ್ತಿತ್ತು. ಯಾವುದೇ ಅದ್ಧೂರಿ ಸೆಟ್‌ಗೂ ಕಡಿಮೆಯಿಲ್ಲದ ರೀತಿಯಲ್ಲಿ, ಶಿಸ್ತು, ವೈಭವ ಹಾಗೂ ರಾಷ್ಟ್ರಭಕ್ತಿಯ ಅಪೂರ್ವ ವಾತಾವರಣದಲ್ಲಿ ‘ಸಂಕಲ್ಪ ಶಿವಮೊಗ್ಗ’ ಹಾಗೂ 40ಕ್ಕೂ ಹೆಚ್ಚು ಪ್ರಮುಖ ಸಂಘ-ಸಂಸ್ಥೆಗಳ ಮಹಾಸಂಗಮದೊಂದಿಗೆ ಆಯೋಜಿಸಿದ್ದ ‘ಸ್ವದೇಶಿ ಮಂತ್ರ’ ಬೃಹತ್ ಸಮಾವೇಶ ಜನಮನ ಸೆಳೆಯಿತು.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಸಂಕಲ್ಪ ಶಿವಮೊಗ್ಗ’ ವತಿಯಿಂದ ಹಲವು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವದೇಶಿ ಮಂತ್ರ’ ಕಾರ್ಯಕ್ರಮವು ಶಿವಮೊಗ್ಗ ನಗರದಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿತು. ರಾತ್ರಿ 9ರಿಂದ ಮಧ್ಯರಾತ್ರಿ 12ರವರೆಗೆ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ನಾಗರಿಕರು ಪಾಲ್ಗೊಂಡು ರಾಷ್ಟ್ರಭಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾದರು.ಈ ಸಂದರ್ಭ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಂಕಲ್ಪ ಶಿವಮೊಗ್ಗ ಕೇವಲ ಒಂದು ಸಂಘಟನೆಯಲ್ಲ; ವಕೀಲರು, ಸರ್ಕಾರಿ ಅಧಿಕಾರಿಗಳು, ಸರ್ಕಾರಿ ನೌಕರರು, ಶಿಕ್ಷಣ ಕ್ಷೇತ್ರದ ಸಾಧಕರು, ಚಿಂತಕರು, ಸಾಂಸ್ಕೃತಿಕ ಪ್ರತಿಭೆಗಳು, ಕ್ರೀಡಾಪಟುಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ವಿಚಾರವಂತರನ್ನು ಒಂದೇ ವೇದಿಕೆಗೆ ತರುವ ಸಾಮಾಜಿಕ ಸಮನ್ವಯದ ವೇದಿಕೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಎನ್ನುವುದು ಯಾರೋ ನೀಡಿದ ಕೊಡುಗೆಯಲ್ಲ. ಶತಮಾನಗಳ ಹೋರಾಟ, ಲಕ್ಷಾಂತರ ಜನರ ತ್ಯಾಗ, ಬಲಿದಾನ, ನೋವು, ರಕ್ತ ಮತ್ತು ಅಚಲ ದೇಶಭಕ್ತಿಯ ಫಲವಾಗಿ ದೊರೆತ ಅಮೂಲ್ಯ ಸ್ಮರಣಾಂಜಲಿ ಎಂದರು.ತಾಯಂದಿರು ತಮ್ಮ ಮಕ್ಕಳಲ್ಲಿ ರಾಷ್ಟ್ರಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ ಮತ್ತು ದೇಶಭಕ್ತಿಯ ಗುಣಗಳನ್ನು ಬೆಳೆಸಬೇಕು ಎಂಬ ಅವರ ಮನವಿಯೂ ಕಾರ್ಯಕ್ರಮಕ್ಕೆ ಭಾವನಾತ್ಮಕ ಸ್ಪರ್ಶ ನೀಡಿತು. ಸುಮಾರು 40 ಸಂಘ-ಸಂಸ್ಥೆಗಳು ಒಂದೇ ವೇದಿಕೆಯಡಿ ಕೈಜೋಡಿಸಿರುವುದು ‘ಸಂಕಲ್ಪ ಶಿವಮೊಗ್ಗ’ದ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು.
‘ಸಂಕಲ್ಪ’ಕ್ಕೆ ಹೊಸ ದಿಕ್ಕು ನೀಡಿದ ಮೊದಲ ಹೆಜ್ಜೆಮೊದಲ ಕಾರ್ಯಕ್ರಮದಲ್ಲೇ ಸಾವಿರಾರು ಜನರನ್ನು ಒಗ್ಗೂಡಿಸಿ, ದೇಶಭಕ್ತಿ, ಸ್ವದೇಶಿ ಚಿಂತನೆ, ಕನ್ನಡಾಭಿಮಾನ, ಸಾಮಾಜಿಕ ಸಮನ್ವಯ ಹಾಗೂ ಯುವಶಕ್ತಿಯ ಜಾಗೃತಿಯ ಸಂದೇಶವನ್ನು ಸಾರಿದ ‘ಸಂಕಲ್ಪ ಶಿವಮೊಗ್ಗ’ದ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಮುಖಿ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದಂತಾಯಿತು.
ಯೋಧರಿಗೆ ಗೌರವ, ದೇಶಭಕ್ತಿಗೆ ನಮನ: ದೇಶದ ಗಡಿಗಳನ್ನು ಕಾಯುತ್ತಿರುವ ಯೋಧರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮವು ರಾಷ್ಟ್ರರಕ್ಷಣೆಯ ಮಹತ್ವವನ್ನು ಸಾರಿತು. ಮುಂದಿನ ದಿನಗಳಲ್ಲಿ ನವೆಂಬರ್ ಕನ್ನಡ ರಾಜ್ಯೋತ್ಸವವನ್ನು ಶಿವಮೊಗ್ಗದ ಕ್ರೀಡಾಂಗಣದಲ್ಲಿ 25ರಿಂದ 30 ಸಾವಿರ ಜನರ ಸಮ್ಮುಖದಲ್ಲಿ ಆಯೋಜಿಸುವ ಮಹತ್ವಾಕಾಂಕ್ಷೆಯ ಸಂಕಲ್ಪವನ್ನೂ ಷಡಾಕ್ಷರಿ ಹಂಚಿಕೊಂಡರು. ಮಧ್ಯರಾತ್ರಿಯತ್ತ ಕಾರ್ಯಕ್ರಮ ಸಾಗುತ್ತಿದ್ದರೂ ಜನರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ದೇಶಭಕ್ತಿ ಗೀತೆಗಳ ನಡುವೆ ಮೊಳಗಿದ ಘೋಷಣೆಗಳು ವಾತಾವರಣವನ್ನೇ ರಾಷ್ಟ್ರಭಕ್ತಿಯ ಅಲೆಯಲ್ಲಿ ಮುಳುಗಿಸಿದವು.