ಸೂಲಗಿತ್ತಿ ನರಸಮ್ಮ ಸೇವೆ ಮಾದರಿ

| Published : Aug 12 2024, 12:45 AM IST

ಸಾರಾಂಶ

ನರಸಮ್ಮ ಅವರ ಸಮಾಜ ಸೇವೆ ಇಂದಿನ ಪೀಳಿಗೆಗೂ ಮಾದರಿ

ಕನ್ನಡಪ್ರಭ ವಾರ್ತೆ ತುಮಕೂರು

ವೈದ್ಯಕೀಯ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಸಾವಿರಾರು ಹೆರಿಗೆಗಳನ್ನು ಮಾಡಿ, ತಾಯಿ, ಮಗು ಇಬ್ಬರಿಗೂ ಹೊಸ ಜನ್ಮ ನೀಡಿದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಸಮಾಜ ಸೇವೆ ಇಂದಿನ ಪೀಳಿಗೆಗೂ ಮಾದರಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಉದ್ಯಾನವನದಲ್ಲಿ ನರಸಮ್ಮ ಅವರ 104ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜನ್ಮ ದಿನಾಚರಣೆ ಸಂಬಂಧ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರಸಮ್ಮ ಅವರು ಮಾಧ್ಯಮಗಳಿಲ್ಲದ ಕಾಲದಲ್ಲಿ ಯಾವ ಪ್ರಚಾರ ಬಯಸದೆ, ಎಡಗೈನಲ್ಲಿ ನೀಡಿದ್ದ ಬಲಗೈಗೆ ತಿಳಿಯದಂತೆ ಸಮಾಜ ಸೇವೆ ಮಾಡಿದ್ದಾರೆ. ಇಂತಹ ತೆರೆ ಮೆರೆಯ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಯಂತಹ ಗೌರವ ನೀಡುವ ಮೂಲಕ ಕೇಂದ್ರ ಸರಕಾರ ಸಹ ಮಾದರಿಯಾಗಿದೆ ಎಂದರು.ಪ್ರಶಸ್ತಿಗಳನ್ನು ಶಿಫಾರಸ್ಸು ಮಾಡಿ ಪಡೆಯುತ್ತಿರುವ ಈ ಕಾಲದಲ್ಲಿ ಯಾವುದೇ ಶಿಫಾರಸ್ಸುಗಳಿಲ್ಲದೆ, ತನ್ನ ಸೇವೆಯ ಮೂಲಕವೇ ಜನಮಾನಸದಲ್ಲಿ ಹೆಸರಾದ ಡಾ.ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಲಭಿಸುತ್ತಿರುವುದು, ಅದು ಅವರಿಗೆ ಸಂದ ಗೌರವವಲ್ಲ. ಅವರು ಪ್ರತಿನಿಧಿಸುವ ಇಡೀ ಸಮುದಾಯಕ್ಕೆ ಸಂದ ಗೌರವಾವಾಗಿದೆ. ತುಮಕೂರು ಮಹಾನಗರಪಾಲಿಕೆ ಸಹ ಅವರ ನೆನಪನ್ನು ಅಚ್ಚ ಹರಿಸಾಗಿಸುವ ನಿಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಉದ್ಯಾನವನಕ್ಕೆ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರಿಡುವ ಮೂಲಕ ಅವರ ಹೆಸರು ಅಚ್ಚಳಿಯದಂತೆ ಮಾಡಿದೆ. ಇದಕ್ಕಾಗಿ ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಎಲ್ಲಾ ನಾಗರಿಕರನ್ನು ಅಭಿನಂದಿಸುವುದಾಗಿ ತಿಳಿಸಿದರು.ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಪುತ್ರ ಪಾವಗಡ ಶ್ರೀರಾಮ್ ಮಾತನಾಡಿ, ನರಸಜ್ಜಿಯ ಬಳಿ ಯಾರೇ ಹೋದರೆ ಅವರಿಗೆ ಮುಕ್ತ ಮನಸ್ಸಿನಿಂದ ಆಶೀರ್ವಾದ ಮಾಡುತ್ತಿದ್ದರು. ಟೌನ್‌ಹಾಲ್ ಮುಂಭಾಗದ ಪಾರ್ಕಿಗೆ ಅಜ್ಜಿಯ ಹೆಸರಿಡಲು ಕಾರ್ಪೋರೇಟ್ ಆದ ಗಿರಿಜಾ ಧನಿಯಕುಮಾರ್, ಧನಿಯಕುಮಾರ್, ಅವರೊಂದಿಗೆ ಶಾಸಕರು ಕಾರಣ. ಈ ಪಾರ್ಕು ಇರುವವರೆಗೂ ಅವರ ಹೆಸರು ಜನಮಾನಸದಲ್ಲಿ ಉಳಿಯಲಿದೆ ಎಂದರು.

ಈ ವೇಳೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್,ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿದರು. ಲೀಡ್ಕರ್ ಮಾಜಿ ಅಧ್ಯಕ್ಷ ಶಂಕರಪ್ಪ,ಯೋಗೀಶ್ ಸೋರೆಕುಂಟೆ ಸೇರಿದಂತೆ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಕುಟುಂಬಸ್ತರು, ಉಪಸ್ಥಿತರಿದ್ದರು. ನಗರದ ಟೌನ್ ಹಾಲ್ ನಿಂದ ವಿವಿಧ ಜಾನಪದ ಕಲಾ ಮೇಳೆಗಳ ಪ್ರದರ್ಶನದೊಂದಿಗೆ ನಗರದ ಬಾಲಭವನದವರೆಗೆ ಮೆರವಣಿಗೆ ಸಾಗಿತು.

ಕೋಟ್‌

ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ರೀತಿಯೇ ಅವರ ಪುತ್ರರಾದ ಪಾವಗಡ ಶ್ರೀರಾಮ್ ಅವರು ಒಳಮೀಸಲಾತಿ ಹೋರಾಟಕ್ಕೆ ಮಾದಿಗ ದಂಡೋರ ಸಂಘಟನೆ ಕಟ್ಟಿಕೊಂಡು ಕಳೆದ 30 ವರ್ಷಗಳಿಂದ ಹಗಲಿರುಳೇನ್ನದೆ, ಸೈಕಲ್ ಯಾತ್ರೆ, ಅರೆ ಬೆತ್ತಲೆ ಮೆರವಣಿಗೆ, ವಿಧಾನಸೌಧ ಚಲೋ ಹಾಗೂ ಕಾನೂನು ಹೋರಾಟವನ್ನು ನಡೆಸಿದ್ದಾರೆ. ಅವರ ಹೋರಾಟಕ್ಕೆ ಜಯಸಿಕ್ಕಿದೆ. ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತರುವ ಮೂಲ ಈ ಸಮುದಾಯದ ಬಹುದಿನಗಳ ಕನಸನ್ನು ನನಸು ಮಾಡಬೇಕು - ಶ್ರೀಮಾದಾರ ಚನ್ನಯ್ಯಸ್ವಾಮೀಜಿ