ನಾಗರಪಂಚಮಿ ಅಂಗವಾಗಿ ಶಾಲಾ ಮಕ್ಕಳಿಗೆ ಹಾಲು ವಿತರಣೆ

| Published : Jul 30 2025, 12:45 AM IST

ಸಾರಾಂಶ

ರಾಮನಗರ: ತಾಲೂಕಿನ ರಾಮಗಿರಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಾಗರಪಂಚಮಿ ಅಂಗವಾಗಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ವತಿಯಿಂದ ಹಾಲನ್ನು ವಿತರಿಸಲಾಯಿತು.

ರಾಮನಗರ: ತಾಲೂಕಿನ ರಾಮಗಿರಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಾಗರಪಂಚಮಿ ಅಂಗವಾಗಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ವತಿಯಿಂದ ಹಾಲನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮನೋರೋಗ ತಜ್ಞ ಡಾ.ಶಿವಸ್ವಾಮಿ ಮಾತನಾಡಿ, ಹಬ್ಬಗಳ ಹೆಸರಿನಲ್ಲಿ, ಹಬ್ಬಗಳ ಆಚರಣೆ ಹೆಸರಿನಲ್ಲಿ ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಹಾಕದೇ ಮನೆಯಲ್ಲಿ ಹಿರಿಯರಿಗೆ, ಮಕ್ಕಳಿಗೆ, ಬಡವರಿಗೆ, ರೋಗಿಗಳಿಗೆ ನೀಡಬೇಕು ಎಂದು ತಿಳಿಸಿದರು.

ಮೂಢನಂಬಿಕೆಗಳನ್ನು ತೊಡೆದು ಹಾಕುವ ಮೂಲಕ ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು. ನಾಗರ ಪಂಚಮಿ ಹಬ್ಬದಲ್ಲಿ ಕಲ್ಲು ನಾಗರಕ್ಕೆ ಹಾಲನ್ನು ಎರೆಯುವ ಮೂಲಕ ಕುಡಿಯುವ ಹಾಲನ್ನು ಮಣ್ಣು ಪಾಲು ಮಾಡುತ್ತಾರೆ. ಹಾಲು ಅಮೃತ ಸಮಾನ ಹಾಗೂ ಸಂಜೀವಿನಿಯಾಗಿದ್ದು ಅದು ವಿಟಮಿನ್ ನೀಡುತ್ತದೆ ಎಂದರು.

ಹಾವು ಹಾಲು ಕುಡಿಯುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯವಾಗಿದೆ. ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಕುಡಿಯಲು ಹಾಲು ಸಿಗುತ್ತಿಲ್ಲ. ಬಹಳಷ್ಟು ಮಕ್ಕಳು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳು ವಯೋವೃದ್ಧರು, ರೋಗಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ಹಾಲನ್ನು ನೀಡಬೇಕು ಎಂದರು.

ಮನೋ ವೈದ್ಯಕೀಯ ಕಾರ್ಯಕರ್ತೆ ಎಸ್. ಪದ್ಮರೇಖಾ ಮಾತನಾಡಿ, ಹಾವಿನ ಆಹಾರ ಇಲಿ, ಹುಳ ಹುಪ್ಪಡಿಗಳು. ಹಾವುಗಳು ಎಂದಿಗೂ ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ಕುಡಿಯುವುದರಿಂದ ಮೂಳೆಗಳು ಸದೃಢವಾಗುತ್ತವೆ ಹಾಗೂ ಆಯುಷ್ಯ ವೃದ್ಧಿಸುತ್ತದೆ. ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಜಯಮ್ಮ, ಶಿಕ್ಷಕ ಹನುಮಂತಯ್ಯ, ಸಾಮಾಜಿಕ ಕಾರ್ಯಕರ್ತರಾದ ಗೋವಿಂದಸ್ವಾಮಿ, ವೆಂಕಟರಾಜು, ರಾಘವೇಂದ್ರ ಮತ್ತಿತರರು ಹಾಜರಿದ್ದರು.

29ಕೆಆರ್ ಎಂಎನ್ 4.ಜೆಪಿಜಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಾಗರಪಂಚಮಿ ಅಂಗವಾಗಿ ಹಾಲನ್ನು ವಿತರಿಸಿದರು.