ಹಾಲಿನ ಪುಡಿ ಸೇರಿದಂತೆ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಕಲಬೆರಕೆಯಾಗಿಲ್ಲ. ಕೆಲವರು ನಂದಿನಿ ಉತ್ಪನ್ನಗಳಿಗೆ ಕೆಟ್ಟ ಹೆಸರುವ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಬಿತ್ತರ ಮಾಡಿದ್ದಾರೆ. ಈ ವರದಿ ಸತ್ಯಕ್ಕೆ ದೂರವಾದದ್ದು. ಗ್ರಾಹಕರು ಇದನ್ನು ನಂಬಬಾರದು.
ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲಿನ ಪುಡಿ ಸೇರಿದಂತೆ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಕಲಬೆರಕೆಯಾಗಿಲ್ಲ. ಕೆಲವರು ನಂದಿನಿ ಉತ್ಪನ್ನಗಳಿಗೆ ಕೆಟ್ಟ ಹೆಸರುವ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಬಿತ್ತರ ಮಾಡಿದ್ದಾರೆ. ಈ ವರದಿ ಸತ್ಯಕ್ಕೆ ದೂರವಾದದ್ದು. ಗ್ರಾಹಕರು ಇದನ್ನು ನಂಬಬಾರದು ಎಂದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಎಂ.ಕೆ.ಹರೀಶ್‌ಬಾಬು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಉತ್ಪನ್ನಗಳ ಕುರಿತಂತೆ ಸಾಮಾಜಿಕ ಜಾಲತಾಣಲ್ಲಿ ಕೆಎಂಎಫ್ ಉತ್ಪನ್ನಗಳು ಕಲಬೆರಕೆಯಾಗುತ್ತಿವೆ ಎಂಬ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇದು ಉತ್ಪಾದಕರು ಮತ್ತು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದರು.
ಮಂಡ್ಯ ಹಾಲು ಒಕ್ಕೂಟದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿ ಮನ್ಮುಲ್ ಆವರಣದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಮಾಡಿ ಹೆಚ್ಚಿಗೆಯಾದಲ್ಲಿ ಖಾಸಗಿ ಗೋದಾಮಿನಲ್ಲಿ ಬಾಡಿಗೆ ಆಧಾರದ ಮೇಲೆ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗುತ್ತದೆ. ಇದಕ್ಕೆ ತನ್ನದೇ ಆದ ನಿಯಮಗಳೂ ಇವೆ. ಅದೇ ರೀತಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮಾಸ್ಟರ್ ಇನ್ಸುಲೇಷನ್ ಇಂಕ್ ಕಂಪನಿಗೆ ನಿಯಮಾನುಸಾರ ಗೋದಾಮನ್ನು ಬಾಡಿಗೆ ಆದಾರದ ಮೇಲೆ ಪಡೆದು ಅಲ್ಲಿ ಹಾಲಿನ ಪುಡಿ ದಾಸ್ತಾನು ಮಾಡಲಾಗಿತ್ತು ಎಂದರು.ಮನ್ಮುಲ್ ಆವರದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಖಾಲಿಯಾದ ಕಾರಣ ಖಾಸಗಿ ಗೋದಾಮಿಗೆ ನೀಡುವ ಬಾಡಿಗೆಯನ್ನು ತಪ್ಪಿಸುವ ಸಲುವಾಗಿ ಅಲ್ಲಿಂದ ಹಾಲಿನ ಪುಡಿ ದಾಸ್ತಾನನ್ನು ಎತ್ತುವಳಿ ಮಾಡಲು ಸಂಬಂಧಿಸಿದ ಗೋದಾಮಿನ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಅದರಂತೆ ಅಲ್ಲಿಗೆ ತೆರಳಿದ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ನಮ್ಮಲ್ಲಿ ಉತ್ಪಾದನೆಯಾದ ಹಾಲಿನ ಪೌಡರ್ ಚೀಲದಲ್ಲಿ ಒಂದು ಸ್ಟಿಚ್ ಹಾಕಿರುತ್ತೆ. ಅಲ್ಲಿ ದಾಸ್ತಾನಾಗಿದ್ದ ಚೀಲಗಳಲ್ಲಿ ಎರಡು ಸ್ಟಿಚ್ ಹಾಕಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ನಾವು ಪರಿಶೀಲನೆ ನಡೆಸಿದ ವೇಳೆ ಕಳಪೆ ಗುಣಮಟ್ಟದ 55.475 ಮೆ.ಟನ್ ಹಾಲಿನ ಪುಡಿ ಚೀಲಗಳು ಕಂಡುಬಂದವು ಎಂದು ವಿವರಿಸಿದರು.
ನಮ್ಮ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ವೇಳೆ ಹಾಲಿನ ಪುಡಿ ಕಳಪೆ ಗುಣಮಟ್ಟದ್ದಾಗಿದ್ದು, ಇವುಗಳನ್ನು ಮಾರ್ಕ್ ಮಾಡಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ತಡೆ ಹಿಡಿಯಲಾಯಿತು. ಈ ಬಗ್ಗೆ ಎಫ್‌ಎಸ್‌ಎಸ್‌ಎಎಲ್‌ಗೆ ಗುಣಮಟ್ಟ ತಪಾಸಣೆಗೆ ಕಳುಹಿಸಲಾಗಿತ್ತು. ಈ ಮಧ್ಯೆ ಗೋದಾಮಿನ ಮಾಲೀನ ವಂಚನೆ, ಮೋಸವನ್ನು ಗಮನಿಸಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಆತ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಇತ್ತ ಎಫ್‌ಎಸ್‌ಎಸ್‌ಎಎಲ್‌ನಿಂದ ಕಳಪೆ ಗುಣಮಟ್ಟದ ಹಾಲಿನ ಪುಡಿ ಎಂಬ ವರದಿಯೂ ಇತ್ತೀಚೆಗೆ ಬಂತು ಎಂದು ತಿಳಿಸಿದರು.ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆದರೆ, ಕೆಲವರು ನಂದಿನಿ ಉತ್ಪನ್ನಗಳಿಗೆ ಕೆಟ್ಟ ಹೆಸರುವ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಗುಣಮಟ್ಟ ಸರಿಯಿಲ್ಲ ಎಂಬಂತೆ ಬಿಂಬಿಸಿ ವರದಿ ಬಿತ್ತರಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದರು.
ನಂದಿನಿ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುವ ಕಾರಣ ತಿರುಪತಿಯಂತಹ ಧಾರ್ಮಿಕ ಕ್ಷೇತ್ರಕ್ಕೆ ನಮ್ಮ ಮನ್ಮುಲ್‌ನಿಂದಲೇ ತುಪ್ಪವನ್ನು ಕಳುಹಿಸುತ್ತಿದ್ದೇವೆ. ಅದೂ ಸಹ ಎಫ್‌ಎಸ್‌ಎಸ್‌ಎಎಲ್‌ನಲ್ಲೂ ಉತ್ತಮ ಗುಣಮಟ್ಟದ್ದಾಗಿದೆ ಎಂದು ವರದಿಯೂ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಇಂತಹ ಜಾಲತಾಣಗಳ ವರದಿಗಳನ್ನು ನಂಬಬಾರದು ಎಂದು ಗ್ರಾಹಕರಲ್ಲಿ ಅವರು ಮನವಿ ಮಾಡಿದರು.ಗೋದಾಮಿನಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣಾ ಹಂತದಲ್ಲಿದೆ. ಆತನ ಪರವಾನಗಿ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಕೆಎಂಎಫ್ ದೂರು ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು, ನಿರ್ದೇಶಕರಾದ ಅಪ್ಪಾಜಿಗೌಡ, ಯು.ಸಿ.ಶಿವಕುಮಾರ್ (ಶಿವಪ್ಪ), ಲಕ್ಷ್ಮಿನಾರಾಯಣ್, ಬೋರೇಗೌಡ ಇತರರು ಇದ್ದರು.