ಹೊಸಕೋಟೆ ಡೇರಿಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಗೆ ಹಾಲು ಉತ್ಪಾದಕರ ಸಂಘ ವಿರೋಧ

| Published : Aug 10 2024, 01:38 AM IST / Updated: Aug 10 2024, 01:39 AM IST

ಹೊಸಕೋಟೆ ಡೇರಿಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಗೆ ಹಾಲು ಉತ್ಪಾದಕರ ಸಂಘ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶವನ್ನು ಅಳವಡಿಸಿರುವ ಬಮೂಲ್ ವಿರುದ್ಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

-ಡೇರಿ ಸಿಬ್ಬಂದಿ ಸಭೆ -ಹೊಸ ಪದ್ದತಿಯಿಂದ ಸಮಯ ವ್ಯರ್ಥ, ಅಧಿಕ ಕೆಲಸ, ಹಳೇ ಪದ್ದತಿಯೇ ಮುಂದುವರೆಸಲು ಆಗ್ರಹಕನ್ನಡಪ್ರಭ ವಾರ್ತೆ ಹೊಸಕೋಟೆ

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶವನ್ನು ಅಳವಡಿಸಿರುವ ಬಮೂಲ್ ವಿರುದ್ಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿ, ಹಳೆಯ ಪದ್ದತಿಯನ್ನೇ ಮುಂದುವರೆಸಬೇಕು ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.

ತಾಲೂಕಿನ ಚಿಕ್ಕಹುಲ್ಲೂರು ಬಳಿ ಇರುವ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಕ್ಷೇಮಾಭಿವೃದ್ದಿ ಸಂಘ ಏರ್ಪಡಿಸಿದ್ದ ಡೇರಿ ಸಿಬ್ಬಂದಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಲಿನ ಡೇರಿಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆಯಿಂದ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಸಿಬ್ಬಂದಿಗೆ ಬೆಳಿಗ್ಗೆ ಹಾಗೂ ಸಂಜೆ ತಲಾ ೨ ಗಂಟೆ ಸಮಯ ವ್ಯರ್ಥವಾಗಲಿದೆ ಎಂದರು.ಹಾಲು ಉತ್ಪಾದಕರು ಸಹ ಸರದಿಯಲ್ಲಿ ಹೆಚ್ಚಿನ ಸಮಯ ನಿಲ್ಲಬೇಕಾಗುತ್ತದೆ. ಪ್ರಮುಖವಾಗಿ ಗ್ರಾಮೀಣ ಭಾಗದ ಡೇರಿಗಳಲ್ಲಿ ಗುಣಮಟ್ಟದ ಕಂಪ್ಯೂಟರ್ ವ್ಯವಸ್ಥೆ ಇಲ್ಲ. ಜೊತೆಗೆ ಅಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಪ್ರತಿ ತಿಂಗಳು ಅಂತರ್ಜಾಲ ಸಂಪರ್ಕಕ್ಕಾಗಿ ಒಂದೆರಡು ಸಾವಿರ ಹಣ ಖರ್ಚು ಮಾಡಬೇಕು. ಸಾಕಷ್ಟು ಡೇರಿಗಳಲ್ಲಿ ಸಂಬಳ ಕೊಡಲು ಹಣವಿಲ್ಲದೆ ನಷ್ಟದಲ್ಲಿ ನಡೆಯುತ್ತಿದೆ. ಹೀಗಿರುವಾಗ ಅಂತರ್ಜಾಲ ಸಂಪರ್ಕಕ್ಕೆ ಬಮುಲ್ ಹಣ ಕೊಡುವುದಿಲ್ಲ. ನಮ್ಮ ಸಂಘಗಳಿಂದಲೇ ಭರಿಸಬೇಕು. ಪ್ರಮುಖವಾಗಿ ಡೇರಿಗಳಲ್ಲಿ ಸಾಕಷ್ಟು ಕಾರ್ಯನಿರ್ವಹಣಾಧಿಕಾರಿಗಳು ವಿದ್ಯಾಭ್ಯಾಸ ಕಡಿಮೆ ಇರುವವರು. ಅವರಿಂದ ಈ ತಂತ್ರಾಂಶ ಬಳಸಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಡೇರಿಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಯನ್ನು ನಾವು ವಿರೋಧಿಸುತ್ತೇವೆ ಎಂದರು.

ಡೇರಿ ನೌಕರರ ಕ್ಷೇಮಾಭಿವೃದ್ದಿ ಪ್ರಧಾನ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಈ ಏಕರೂಪ ತಂತ್ರಾಂಶ ಅಳವಡಿಕೆ ಮಾಡದಿದ್ದರೆ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರುವ ೫ ರು. ಪ್ರೋತ್ಸಾಹ ಧನ ಸಿಕ್ಕಲ್ಲ ಎಂದು ಅಧಿಕಾರಿಗಳು ಡೇರಿ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ನಾವು ಸಂಘದಿಂದ 200 ಡೇರಿಗಳ ಸಿಬ್ಬಂದಿಯನ್ನು ಸಭೆ ಕರೆದು ಚರ್ಚೆ ನಡೆಸಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ನಾವು ಈ ತಂತ್ರಾಂಶ ಅಳವಡಿಸಲು ವಿರೋಧ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗೆ ತರಬೇತಿ ಕೊಟ್ಟು ಜೊತೆಗೆ ಎಲ್ಲಾ ಡೇರಿಗಳಿಗೂ ಹೊಸ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿದ ಬಳಿಕ ತಂತ್ರಾಂಶ ಅಳವಡಿಕೆ ಮಾಡಲಿ. ಆದರೆ ವಿನಾಕಾರಣ ಸಿಬ್ಬಂದಿಯನ್ನು ಬೆದರಿಸಿ ಅಳವಡಿಸಲು ಮುಂದಾದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಚಂದ್ರಶೇಖರ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಮಾಧವರೆಡ್ಡಿ, ಡೇರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಹರೀಶ್, ಮಂಜುನಾಥ್, ಖಜಾಂಚಿ ಮೂರ್ತಿ, ನಿರ್ದೇಶಕ ಬ್ಯಾಟಗೌಡ, ಹಿರಿಯ ಮಾರ್ಗದರ್ಶಕ ಹೇಮಣ್ಣ, ಬಮುಲ್ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಶ್ರೀರಾಮ್, ಪಶು ವೈದ್ಯಕೀಯ ಸಹಾಯಕ ವ್ಯವಸ್ಥಾಪಕ ಸಂತೋಷ್ ವಿಸ್ತರಣಾಧಿಕಾರಿಗಳಾದ ರಮೇಶ್, ಪವಿತ್ರ, ಮಹೇಶ್, ರಘುನಾಥ್, ವಿನಯ್, ವಿದ್ಯಾ ಇತರರಿದ್ದರು.