ಹಾಲಿನ ಖರೀದಿ ದರ ಕಡಿತ: ಉತ್ಪಾದಕರಿಗೆ ಅನ್ಯಾಯ

| Published : Oct 07 2024, 01:39 AM IST

ಹಾಲಿನ ಖರೀದಿ ದರ ಕಡಿತ: ಉತ್ಪಾದಕರಿಗೆ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ, ರಾಜ್ಯದ ಹಾಲು ಉತ್ಪಾದಕರಿಗೆ ಕೊಡುವ ಬೆಲೆಯಲ್ಲಿ 1.5 ರು. ನಿಂದ 2 ರು.ವರೆಗೆ ಕಡಿತಗೊಳಿಸುವ ಮೂಲಕ ಹೈನುಗಾರರ ಶ್ರಮಕ್ಕೆ ತಣ್ಣೀರೆರೆಚುವ ಕೆಲಸ ಮಾಡಿದೆ. ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ಬೆಳೆ ಹಾನಿಯಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಲೆ ಕುಸಿತದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುತ್ತಿದ್ದರೆ, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ದರವನ್ನೂ ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ, ರಾಜ್ಯದ ಹಾಲು ಉತ್ಪಾದಕರಿಗೆ ಕೊಡುವ ಬೆಲೆಯಲ್ಲಿ 1.5 ರು. ನಿಂದ 2 ರು.ವರೆಗೆ ಕಡಿತಗೊಳಿಸುವ ಮೂಲಕ ಹೈನುಗಾರರ ಶ್ರಮಕ್ಕೆ ತಣ್ಣೀರೆರೆಚುವ ಕೆಲಸ ಮಾಡಿದೆ. ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ಬೆಳೆ ಹಾನಿಯಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್‌ಗೆ ಬೆಂಬಲ ಬೆಲೆ ಹೆಚ್ಚಿಸಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರದ ಹಾಲು ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರ ಕಡಿತಗೊಳಿಸಿ ಹೈನುಗಾರರನ್ನು ಹೈರಾಣಾಗಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ ಗರಿಷ್ಠ 30 ರಿಂದ 50 ರು. ನೀಡಿ ಖರೀದಿ ಮಾಡುತ್ತಿದ್ದವು. ಆದರೀಗ 1.5 ರು. ಕಡಿತಗೊಳಿಸಿ ರೈತರಿಗೆ ಪ್ರತಿ ಲೀಟರ್ ಗೆ 28, 29 ರು. ನೀಡುತ್ತಿವೆ. ಕೆಲವೆಡೆ ಇದಕ್ಕೂ ಖೋತಾ ಆಗಿದೆ. ಇದು ಹೈನುಗಾರರ ಮಾಡಿರುವ ಅನ್ಯಾಯವಾಗಿದೆ ಎಂದು ದೂರಿದ್ದಾರೆ.

ಹಾಲು ಉತ್ಪಾದಕರು ದರ ಕಡಿತದ ಬಗ್ಗೆ ಪ್ರಶ್ನಿಸಿದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟವು ನಷ್ಟದ ಸಬೂಬು ನೀಡಿದೆ. ನಷ್ಟದ ನೆಪದಲ್ಲಿ ಸರ್ಕಾರ ಹಾಲು ಉತ್ಪಾದಕರಿಗೆ ಬೆಲೆ ಕಡಿತದ ಬರೆ ಎಳೆದಿದೆ. ರೈತರು ಹೈನುಗಾರಿಕೆಯಲ್ಲಿ ನಿಜವಾಗಿ ನಷ್ಟದಲ್ಲಿ ಇರುವುದು ಹಾಲಿನ ಒಕ್ಕೂಟಗಳಲ್ಲ, ರೈತರು. ಕಾರಣ ಹಾಲು ಉತ್ಪಾದನೆ ವೆಚ್ಚ ದುಪ್ಪಟ್ಟಾಗಿದೆ. ಹಸು, ಎಮ್ಮೆಗಳ ಬೆಲೆ ಹೆಚ್ಚಿದೆ. ಪಶು ಆಹಾರ ಬೆಲೆಯೂ ದುಪ್ಪಟ್ಟಾಗಿ ಸಾಕಾಣಿಕೆ ದುಬಾರಿಯಾಗಿದೆ. ಇತ್ತ ನ್ಯಾಯಯುತ ದರವೂ ದಕ್ಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ 2 ತಿಂಗಳ ಹಿಂದೆ 2 ರು. ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಬರೆ ಎಳೆದಿತ್ತು. ಈಗ ಖರೀದಿ ಬೆಲೆ ಕಡಿತಗೊಳಿಸಿ ಉತ್ಪಾದಕರಿಗೂ ಬರೆ ಎಳೆದಿದೆ. ಇನ್ನು ಹಾಲಿನ ಗುಣಮಟ್ಟದ ನೆಪದಲ್ಲಿ ಐದಾರು ರು. ಪ್ರೋತ್ಸಾಹ ಧನಕ್ಕೂ ಕೊಕ್ ನೀಡಿದೆ. ರಾಜ್ಯ ಸರ್ಕಾರ, ಈ ರೀತಿ ಪ್ರೋತ್ಸಾಹ ಧನ ಉಳಿಕೆ, ಖರೀದಿ ದರ ಕಡಿತ, ಮಾರಾಟ ದರ ಹೆಚ್ಚಳ ರೂಪದಲ್ಲಿ ಲೀಟರ್ ಹಾಲಿನ ಮೇಲೆ ಹತ್ತಾರು ರುಪಾಯಿ ಹೆಚ್ಚುವರಿ ಆದಾಯದ ಮಾರ್ಗ ಕಂಡುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ನಮ್ಮದು ರೈತಪರ ಸರ್ಕಾರ, ಜನಪರ ಸರ್ಕಾರ ಎನ್ನುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದು, ನಾಚಿಕೆಯಾಗಬೇಕು ಈ ಸರ್ಕಾರಕ್ಕೆ. ರಾಜ್ಯ ಸರ್ಕಾರ ಕೂಡಲೇ ಬೆಲೆ ಕಡಿತದ ಆದೇಶ ಹಿಂಪಡೆಯಬೇಕು. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.