ಧಾರಾಕಾರ ಮಳೆಯಿಂದಾಗಿ ನೆಲಕ್ಕುರುಳಿದ ರಾಗಿ ಬೆಳೆ

| Published : Oct 23 2024, 12:35 AM IST

ಸಾರಾಂಶ

ಹೊಸದುರ್ಗ : ತಾಲೂಕಿನಾದ್ಯಂತ ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಗಿ ಬೆಳೆ ನೆಲಕ್ಕುರುಳುತ್ತಿದ್ದು ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತಿದೆ.

ಹೊಸದುರ್ಗ : ತಾಲೂಕಿನಾದ್ಯಂತ ಕಳೆದ 15ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಗಿ ಬೆಳೆ ನೆಲಕ್ಕುರುಳುತ್ತಿದ್ದು ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತಿದೆ.

ತಾಲೂಕಿನಲ್ಲಿ ಸುಮಾರು 25,520 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ್ದ ರಾಗಿ ಬೆಳೆ ತೆನೆ ಒಡೆದು ಕಾಳು ಕಟ್ಟುವ ಹಂತದಲ್ಲಿದೆ. ಬಿತ್ತನೆಯಾದ ಸಮಯದಲ್ಲಿ ಮಳೆ ಬಾರದೆ ಎಡೆಕುಂಟೆ ಹೊಡೆಯದ ಕಾರಣ ಬುಡಕ್ಕೆ ಮಣ್ಣು ಸೇರಿಸಲಾಗಿಲ್ಲ. ಅಲ್ಲದೆ ಹುಲ್ಲು ಚನ್ನಾಗಿ ಬರಲಿ ಎಂದು ರೈತರು ರಾಸಾಯಿನಿಕ ಗೊಬ್ಬರ ಹಾಕಿದ್ದಾರೆ. ಇದರಿಂದ ರಾಗಿ ಉತ್ತಮ ಬೆಳೆವಣಿಗೆಯಾಗಿ ತೆನೆಯೂ ಬಂದಿದೆ. ಆದರೆ ಮಳೆ ಹೆಚ್ಚಾದಂತೆ ರಾಗಿ ನೆಲಕ್ಕೆ ಉರುಳಿದೆ. ಮಳೆ ಇನ್ನೂ ಹೆಚ್ಚಾದರೆ ರಾಗಿ ಕೊಳೆಯಲಾರಂಭಿಸುತ್ತದೆ ಎಂಬುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ.

ಸಾವೆ ಜತೆ ರಾಗಿಯಲ್ಲೂ ನಷ್ಟ:ಪೂರ್ವ ಮುಂಗಾರಿನಲ್ಲಿ ಮಳೆ ಬರುವುದು ತಡವಾಗಿದ್ದರಿಂದ ರೈತರು ಸಾವೆ ಬಿತ್ತನೆ ಮಾಡಿದ್ದರು. ಉತ್ತಮ ಬೆಳೆಯೂ ಬಂದಿತ್ತು. ಆದರೆ ಕಟಾವಿನ ವೇಳೆ ಮಳೆ ಹಿಡಿದಿದ್ದರಿಂದ ಸಾವೆ ಕಾಳು ನೆನೆದು ಗುಣಮಟ್ಟ ಕಡಿಮೆಯಾಗಿದೆ. ಹೀಗಾಗಿ ಬೆಲೆ ಸಿಗುವುದೂ ಕಷ್ಟ. ಅದರಂತೆ ರಾಗಿ ಬೆಳೆಯೂ ಆಗುತ್ತದೆ ಎಂಬ ಆತಂಕ ರೈತರನ್ನು ಚಿಂತೆಗೆ ಈಡುಮಾಡಿದೆ.ವಾಡಿಕೆಗಿಂತ ಹೆಚ್ಚು ಮಳೆ:

ತಾಲೂಕಿನಲ್ಲಿ ಈವರೆವಿಗೆ ವಾಡಿಕೆಯಂತೆ 543 ಮಿಮೀ ಮಳೆಯಾಗಬೇಕಿತ್ತು. ಆದರೆ ವಾಡಿಕೆ ಮೀರಿ 724 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ. 13ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಕಳೆದ ವರ್ಷ ಮಳೆಯಿಲ್ಲದೆ ನಷ್ಟ ಅನಿಭವಿಸಿದ್ದ ರೈತರು ಈ ಬಾರಿ ಹೆಚ್ಚು ಮಳೆಯಿಂದ ನಷ್ಟ ಅನುಭವಿಸುವಂತಾಗುತ್ತಿದೆ.