ದಾವಣಗೆರೆ: 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯು ಮುಕ್ತಾಯದ ಹಂತ ತಲುಪಿದೆ. ಬಾಕಿ ಇರುವ ನೋಂದಾಯಿತ ರೈತರು ಮೇ 5 ರೊಳಗೆ ರಾಗಿ ಮಾರಾಟ ಮಾಡಲು ಅಂತಿಮ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
ಖರೀದಿಯ ವಿವರ:ಜಿಲ್ಲೆಯ ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲೂಕುಗಳ ಖರೀದಿ ಕೇಂದ್ರಗಳಲ್ಲಿ ಈಗಾಗಲೇ ರಾಗಿ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 4,954 ರೈತರು 1,38,065 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಾಯಿಸಿದ್ದರು. ಮೇ 1ರ ಅಂತ್ಯಕ್ಕೆ ಒಟ್ಟು 4,779 ರೈತರಿಂದ 1,33,002 ಕ್ವಿಂಟಲ್ (ಶೇ.96.33) ರಾಗಿಯನ್ನು ಈಗಾಗಲೇ ಖರೀದಿಸಲಾಗಿದೆ.
ಅಂತಿಮ ಗಡುವು:ಪ್ರಸ್ತುತ ಖರೀದಿ ಕೇಂದ್ರಗಳಿಗೆ ರಾಗಿ ತರುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಜಿಲ್ಲೆಯ ಬಹುತೇಕ ರೈತರ ಬಳಿ ರಾಗಿ ದಾಸ್ತಾನು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸರ್ಕಾರವು ಮೇ ಮತ್ತು ಜೂನ್ ಮಾಹೆಯ ಪಡಿತರ ವಿತರಣೆಗಾಗಿ ಖರೀದಿಸಿದ ರಾಗಿಯನ್ನು ಮೇ ತಿಂಗಳಿನಲ್ಲೇ ವಿತರಿಸಲು ಆದೇಶಿಸಿದೆ.
ಇನ್ನುಳಿದ 175 ನೋಂದಾಯಿತ ರೈತರು ತಾವು ಬೆಳೆದಿರುವ ರಾಗಿ ದಾಸ್ತಾನನ್ನು ಮೇ 5, 2026ರೊಳಗೆ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು. ಈ ದಿನಾಂಕದ ನಂತರ ಖರೀದಿ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಅರ್ಹ ರೈತರು ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
- - -