ಸಾರಾಂಶ
ಬಿ.ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಬೃಹತ್ ಜನಾಂದೋಲನ ಸಮಾವೇಶ ಸಂಘಟಿಸಿದ ಕಾಂಗ್ರೆಸ್ ಪಕ್ಷವು ತನ್ನ ಶಕ್ತಿಪ್ರದರ್ಶನ ಮೂಲಕ ಬಿಜೆಪಿ- ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ನೀಡಿತು.
ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಕಾಂಗ್ರೆಸ್ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಾಗವಹಿಸಿದ್ದರು.ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಿದರು. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ನಾಯಕರು ಬ್ಯಾಟಿಂಗ್ ಬೀಸಿದರು.
ಹಾಗೆಯೇ, ದೋಸ್ತಿಗಳ ಪಾದಯಾತ್ರೆಗೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಉಪ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನಿಗೆ ನಿಂತರು.ಸಮಾವೇಶ ಉದ್ಘಾಟಿಸಿದ ಸಿಎಂ:
ಕಾಂಗ್ರೆಸ್ ಜನಾಂದೋಲನ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಲ್ಲದೇ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರು, ಕಾಂಗ್ರೆಸ್ ಶಾಸಕರು ಹಾಗೂ ನಾಯಕರು ಪರಸ್ಪರ ಕೈಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. ಅಲ್ಲದೆ, ಕಹಳೆ ಊದುವ ಮೂಲಕ ಪ್ರತಿಪಕ್ಷಗಳಿಗೆ ಪಂಥಾಹ್ವಾನ ನೀಡಿದರು.ಎಂಡಿಎ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ದೋಸ್ತಿ ಪಕ್ಷಗಳ ನಾಯಕರ ಆರೋಪಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದರು.
ಸತ್ಯ ಶೋಧನಾ ಪುಸ್ತಕ ಬಿಡುಗಡೆ:ಇದೇ ವೇಳೆ ಎಂಡಿಎ ಹಗರಣ ಕುರಿತು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರು ಕಳಂಕ ರಹಿತ ಎಂಬ ಸತ್ಯ ಶೋಧನ ಪುಸ್ತಕವನ್ನು ಸಮಾವೇಶದಲ್ಲಿ ಬಿಡುಗಡೆಗೊಳಿಸಲಾಯಿತು. ಎಂಡಿಎ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಇಲ್ಲ ಎಂಬ ಸಾರಾಂಶವು ಈ ಪುಸ್ತಕದಲ್ಲಿ ಅಡಗಿದೆ.
ಈ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಡಾ. ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಈಶ್ವರ್ ಖಂಡ್ರೆ, ಕೆ. ವೆಂಕಟೇಶ್, ಡಾ.ಎಂ.ಸಿ. ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ವಸಂತ್ ಕುಮಾರ್, ವಿನಯ್ ಕುಲಕರ್ಣಿ, ತನ್ವೀರ್ ಸೇಠ್, ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ ಮೊದಲಾದವರು ಇದ್ದರು.