ಸಾರಾಂಶ
ಬಿಸಿಲಿನ ತಾಪಕ್ಕೆ ನೀರು ಬರಿದಾಗುತ್ತಿರುವ ಹಿನ್ನೆಲೆ ತಾಲೂಕಿನ ಕನ್ನಮೇಡಿ ಗ್ರಾಮದ ದೊಡ್ಡ ಕೆರೆಯಲ್ಲಿ ಲಕ್ಷಾಂತರ ಮೀನು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಕನ್ನಡಪ್ರಭವಾರ್ತೆ ಪಾವಗಡ
ಬಿಸಿಲಿನ ತಾಪಕ್ಕೆ ನೀರು ಬರಿದಾಗುತ್ತಿರುವ ಹಿನ್ನೆಲೆ ತಾಲೂಕಿನ ಕನ್ನಮೇಡಿ ಗ್ರಾಮದ ದೊಡ್ಡ ಕೆರೆಯಲ್ಲಿ ಲಕ್ಷಾಂತರ ಮೀನು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ತಾಲೂಕಿನ ಕನ್ನಮೇಡಿ ಗ್ರಾಮದ ಕೆರೆ ಸುಮಾರು 108 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದು, ಕಳೆದ ಸಾಲಿಗೆ ಬಿದಿದ್ದ ಹೆಚ್ಚಿನ ಮಳೆಯ ಪ್ರಮಾಣದಿಂದ ಈ ಕರೆ ತುಂಬಿ ತುಳುಕುತ್ತಿತ್ತು. ಈ ಭಾಗದ ರೈತರ ಕೊಳವೆ ಬಾವಿಗಳ ಅಂತರ್ ಜಲ ಹೆಚ್ಚಳಕ್ಕೆ ಈ ಕರೆಯ ನೀರು ಸಹಕಾರಿಯಾಗಿದ್ದು ಸಾವಿರಾರು ಹೆಕ್ಟೇರು ನೀರಾವರಿ ಪ್ರದೇಶಗಳಿಗೆ ಈ ಕೆರೆಯ ನೀರು ಬಳಕೆಯಾಗುತ್ತಿತ್ತು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಕಾರಣ ಕೆರೆಯ ನೀರು ಬರಿದಾಗುತ್ತಿದೆ. ಕೆರೆಯಲ್ಲಿ ಬೃಹತ್ ಪ್ರಮಾಣದ ನೀರು ಸಂಗ್ರಹವಾಗಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಮೀನುಗಾರಿಕೆ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ, ಗುತ್ತಿಗೆ ಅಧಾರದ ಮೇಲೆ ಮೀನು ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗಿತ್ತು.
ಪೌಷ್ಟಿಕ ಆಹಾರ ವಿತರಣೆ ಹಾಗೂ ಮತ್ತಿತರೆ ಸೌಲಭ್ಯ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ಮೀನುಗಳ ಸಂಖ್ಯೆ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತಿದ್ದ ವೇಳೆಯಲ್ಲಿ ಬಿಸಿಲಿನ ತಾಪಕ್ಕೆ ನೀರು ಖಾಲಿಯಾಗುತ್ತಿದ್ದು, ನೀರಿಲ್ಲದೇ ಮೀನು ಸಾವನ್ನಪ್ಪುತ್ತಿವೆ.