ಸಾರಾಂಶ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದ ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಸರ್ಕಾರು ಬಸ್ಸಿನಲ್ಲಿ ದಿನ ನಿತ್ಯ ಉಚಿತವಾಗಿ ಸಂಚರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಶಿರಾ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದ ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಸರ್ಕಾರು ಬಸ್ಸಿನಲ್ಲಿ ದಿನ ನಿತ್ಯ ಉಚಿತವಾಗಿ ಸಂಚರಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಅವರು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ೫ ಹೊಸ ಅಶ್ವಮೇಧ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿ ದರು. ಶಕ್ತಿ ಯೋಜನೆ ಜಾರಿಯಾದ ನಂತರ ಬಂದ ಮೇಲೆ ಖಾಸಗಿ ಬಸ್ಸುಗಳು ಕಡಿಮೆಯಾಗಿವೆ. ಹೆಚ್ಚು ಸರ್ಕಾರಿ ಬಸ್ಸುಗಳ ಅವಶ್ಯಕತೆ ಇದೆ. ಆದ್ದರಿಂದ ಹಂತ ಹಂತವಾಗಿ ಸರ್ಕಾರ ಹೊಸ ಬಸ್‌ಗಳನ್ನು ನೀಡುತ್ತದೆ. ಶಿರಾ ತಾಲೂಕಿಗೆ ಹೊಸ ೭ ಬಸ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ೫ ಕೊಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ಇನ್ನೂ ೧೦ ಹೊಸ ಬಸ್‌ಗಳನ್ನು ನೀಡುವಂತೆ ಮನವಿ ಮಾಡುತ್ತೇನೆ. ಕೆಲವು ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಶಿರಾ ನಗರಕ್ಕೆ ಬರದೆ ಬೈಪಾಸ್ ನಲ್ಲಿ ಹೋಗುವುದು ಇನ್ನೂ ಬಗೆ ಹರಿದಿಲ್ಲ. ಅದನ್ನು ತಪ್ಪಿಸಲು ನಾನು ಡಿಪ್ಯುಟಿ ಕಮಿಷನರ್ ಅವರಿಗೆ ಮನವರಿಕೆ ಮಾಡಿದ್ದೇನೆ. ಬಸ್‌ಗಳು ಯಾವಾಗಲೇ ಬಂದರೂ ಶಿರಾ ಬಸ್ ನಿಲ್ದಾಣದಲ್ಲಿ ಇಳಿಯಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಇದರಿಂದ ಅನುಕೂಲವಾಗುತ್ತಿದೆ. ಆದರೆ ಈ ಯೋಜನೆಯಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆ ಉಂಟಾಗಿದೆ. ಬಸ್‌ಗಳ ಕೊರತೆಯಿಂದ ಬಾಗಿಲಲ್ಲಿ ನಿಂತುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಆದಷ್ಟು ಅಗತ್ಯವಿರುವ ಕಡೆ ಹೊಸ ಬಸ್‌ಗಳನ್ನು ಬಿಡಬೇಕು ಎಂದರು.ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಪೂಜಾ ಪೆದ್ದರಾಜು, ಜಿಲ್ಲಾ ಸಾರಿಗೆ ನಿಯಂತ್ರಣ ಅಧಿಕಾರಿ ಬಸವರಾಜು, ಶಿರಾ ಘಟಕದ ವ್ಯವಸ್ಥಾಪಕ ಪ್ರತ್ಯಕ್ಷ ರಾವ್, ಮುಖಂಡ ಆರೇಹಳ್ಳಿ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.