ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಸಾಕ್ಷಿಯಾದರು. ಅಚ್ಚುಕಟ್ಟಾದ ವ್ಯವಸ್ಥೆಯಿಂದ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು.ಹಾವೇರಿ ಹೊರವಲಯದ ಅಜ್ಜಯ್ಯನಗುಡಿ ಬಳಿ ವಿಶಾಲವಾದ ಜಾಗದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ವಿವಿಧೆಡೆಯಿಂದ ಜನ ಸಾಗರವೇ ಹರಿದುಬಂದಿತ್ತು. ಬೇರೆ-ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಬಸ್‌ಗಳು, ಖಾಸಗಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಜನ ಆಸೀನರಾಗಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ನೇತೃತ್ವದ ಅಧಿಕಾರಿಗಳ ತಂಡದ ಶ್ರಮದ ಪ್ರತಿಫಲ ಎದ್ದುಕಾಣುತ್ತಿತ್ತು.
ವೇದಿಕೆ ಮೇಲೆ 200 ಆಸನಗಳು, 76 ಸಾವಿರ ಜನ ಕುಳಿತುಕೊಳ್ಳುವ ಸಾಮರ್ಥ್ಯದ ಪೆಂಡಾಲ್ ಅಳವಡಿಸಲಾಗಿತ್ತು. 200 ಊಟದ ಕೌಂಟರ್ ಮಾಡಿದರೂ ಕೆಲವೊಂದು ಕೌಂಟರ್‌ಗಳಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಜರ್ಮನ್ ಟೆಂಟ್ ಹಾಕಿದ್ದರಿಂದ ಹೊರಗೆ ಸುಡು ಬಿಸಿಲಿದ್ದರೂ ನೆಮ್ಮದಿಯಿಂದ ಕೂತು ಎಲ್ಲರ ಮಾತು ಆಲಿಸಿದರು. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಾಹಕ ಸಮಿತಿ, ಹಣಕಾಸು ಸಮಿತಿ, ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಸಮಿತಿ ಮುಖ್ಯ ವೇದಿಕೆ ನಿರ್ಮಾಣ ಸಮಿತಿ, ಆಹಾರ ಮತ್ತು ಕುಡಿಯುವ ನೀರಿನ ಸಮಿತಿ, ಸಾರಿಗೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಸಮಿತಿ, ಹೆಲಿಪ್ಯಾಡ್ ನಿರ್ಮಾಣ ಸಮಿತಿ, ಕಾರ್ಯಕ್ರಮ ನಿರ್ವಹಣಾ ಮತ್ತು ಮುಖ್ಯ ವೇದಿಕ ಶಿಷ್ಟಾಚಾರ ಸಮಿತಿ, ಫಲಾನುಭವಿಗಳ ಆಸನ ವ್ಯವಸ್ಥೆ ಸಮಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ, ವಸತಿ ಸಮಿತಿ ಆರೋಗ್ಯ ಸಮಿತಿ ಒಳಗೊಂಡಂತೆ 15 ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿತ್ತು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ನೆರವೇರಿಸಿದ್ದರ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಯಿತು. ಸಮಾವೇಶದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಅಧಿಕಾರಿಗಳನ್ನೂ ಗುರುತಿಸಿ ಸನ್ಮಾನಿಸಲಾಯಿತು.ಜಿಲ್ಲಾಡಳಿತವನ್ನು ಕೊಂಡಾಡಿದ ಸಚಿವರು...ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಶಾಸಕರು ಶ್ರಮಿಸಿದ್ದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ ತಮ್ಮ ಅಧಿಕಾರಿಗಳ ತಂಡ ಕಟ್ಟಿಕೊಂಡು ಹಗಲಿರುಳು ಕೆಲಸ ಮಾಡಿದ್ದರು. ಹೀಗಾಗಿ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು. ಭಾಷಣ ಮಾಡುವಾಗ ಬಹುತೇಕ ಸಚಿವರು ಜಿಲ್ಲಾಡಳಿತ ಕಾರ್ಯವನ್ನು ಶ್ಲಾಘಿಸಿದರು.ಸಮಾವೇಶದಲ್ಲಿ ಬಿಜೆಪಿ ಶಾಸಕ ಹೆಬ್ಬಾರ ಪ್ರತ್ಯಕ್ಷಇದು ಸರ್ಕಾರಿ ಸಮಾವೇಶವಾಗಿದ್ದರೂ ಬಿಜೆಪಿ ಸಂಸದರು, ಶಾಸಕರು ಇದರಿಂದ ದೂರ ಉಳಿದಿದ್ದರು. ಆದರೆ, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಅಧಿಕಾರಿಗಳಿಗೆ ಹೊಸ ವಾಹನ ಭಾಗ್ಯ..ಭೂ ಗ್ಯಾರಂಟಿ ಸಮಾವೇಶದಲ್ಲಿ ಬೇರೆ-ಬೇರೆ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹೊಸ ವಾಹನಗಳನ್ನು ನೀಡಲಾಯಿತು. ರಾಯಚೂರು, ಉತ್ತರ ಕನ್ನಡ, ಕೋಲಾರ, ಬೀದರ್, ಮಂಗಳೂರು, ತುಮಕೂರು, ವಿಜಯನಗರ ಜಿಲ್ಲೆಯ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಸುಮಾರು 24 ವಾಹನಗಳಿಗೆ ಸಿಎಂ ಹಸಿರು ನಿಶಾನೆ ತೋರಿಸಿದರು.ಶಾಸಕರ ಆಪ್ತರಿಂದ ಹೈಡ್ರಾಮಾಪೊಲೀಸರ ಕರ್ತವ್ಯಕ್ಕೆ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನಡೆಯಿತು.ಪಾಸ್ ಇಲ್ಲದ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್ ಒಳಗೆ ಬಿಡುವಂತೆ ಆಪ್ತರ ಪಟ್ಟು ಹಿಡಿದರು. ಒಳಗೆ ಬಿಡುವ ವರೆಗೂ ಗಾಡಿ ಹಿಂದೆ ತೆಗೆಯುವುದಿಲ್ಲ ಎಂದು ದರ್ಪ ತೋರಿದರು. 20 ನಿಮಿಷಗಳ ಕಾಲ ಬ್ಯಾರಿಕೇಡ್ ಮುಂದೆ ನಿಲ್ಲಿಸಿ ಹೈಡ್ರಾಮ್ ನಡೆಸಿದರು. ಕೊನೆಗೆ ಶಾಸಕರಿಂದ ಪೋನ್ ಕರೆ ಮಾಡಿಸಿ ಒತ್ತಡ ಹಾಕಿ ವಾಹನ ಒಳಗೆ ಒಯ್ದರು.