ಸಾರಾಂಶ
ಮಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಪರಿಹಾರ ಸೂಚಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
4 ಕೋಟಿ ರು. ವೆಚ್ಚದಲ್ಲಿ ಉಪನ್ಯಾಸಕ ಕೊಠಡಿ, ಶವಾಗಾರ ಕಟ್ಟಡಕ್ಕೆ ಗುದ್ದಲಿಪೂಜೆ
ಕನ್ನಡಪ್ರಭ ವಾರ್ತೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಪರಿಹಾರ ಸೂಚಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಸೋಮವಾರ ಮಂಡ್ಯ ಮಿಮ್ಸ್ ಆವರಣದಲ್ಲಿ ಮಂಡ್ಯ ವಿಧಿ ವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡದ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬಹಳ ದಿನಗಳ ಬೇಡಿಕೆಯಾಗಿದ್ದ ವಿಧಿವೈದ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕೊಠಡಿ ಹಾಗೂ ಶವಾಗಾರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ 4 ಕೋಟಿ ರು. ಹಣ ಮಂಜೂರು ಮಾಡಿರುವುದಾಗಿ ತಿಳಿಸಿದರು. ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಹಳ ಅಭಿವೃದ್ಧಿ ಕಾರ್ಯಗಳು ಬಾಕಿಯಿದ್ದು, ಲೋಕಸಭಾ ಚುನಾವಣೆಯ ನಂತರ ಅದನ್ನು ಪೂರ್ಣಗೊಳಿಸಲಾಗುವುದು. ಅರ್ಧದಲ್ಲೇ ನಿಂತಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು 5 ಕೋಟಿ ರು. ವೆಚ್ಚದಲ್ಲಿ 2 ತಿಂಗಳೊಳಗೆ ಮರು ಪ್ರಾರಂಭ ಮಾಡಲಾಗುವುದು. ಒಂದು ವರ್ಷದೊಳಗಾಗಿ ಮೆಡಿಕಲ್ ಕಾಲೇಜು ಹಾಗೂ ಆಧುನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದು ನುಡಿದರು. ಜಿಲ್ಲಾಧಿಕಾರಿಗಳು ಸಿಎಸ್‌ಆರ್ ಅನುದಾನದಡಿ ಸುಲಭ ಶೌಚಾಲಯ ಮತ್ತು ಡಾರ್ಮೆಟರಿ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಹಿಂದಿರುವ ರಸ್ತೆಯು ಹಾಳಾಗಿದ್ದು, ಶಾಸಕರಾದ ಪಿ. ರವಿಕುಮಾರ್ ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಹೇಳಿದರು. ಶಾಸಕ ಪಿ.ರವಿಕುಮಾರ್ ಮಾತನಾಡಿ, ಮಂಡ್ಯ ನಗರದ ಸೌಂದರ್ಯ ಹೆಚ್ಚಿಸಲು ಹಾಗೂ ನಗರಕ್ಕೆ ಹೊಸ ರೂಪ ನೀಡುವ ದೃಷ್ಟಿಯಿಂದ ಹೈಟೆಕ್ ಸ್ಟೀಲ್ ನಾಮಫಲಕವನ್ನು ಅಳವಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಮಿಮ್ಸ್ ಪ್ರಾಂಶುಪಾಲ ತಮ್ಮಣ್ಣ ಸೇರಿದಂತೆ ಇತರರಿದ್ದರು.