ಮನಸ್ಸು ನಿರಂತರ ಹರಿಯುವ ನೀರಿನಂತೆ ಇರಲಿ

| Published : May 15 2025, 01:30 AM IST

ಸಾರಾಂಶ

ಹಳೇ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮ ಮೂಲಕ ಹಲವು ವರ್ಷಗಳ ಬಳಿಕ ಗೆಳೆಯರನ್ನು ಭೇಟಿಯಾಗುವುದೇ ಒಂದು ವಿಶೇಷ ಹಾಗೂ ಸಂತಸದ ಕ್ಷಣ

ಧಾರವಾಡ: ಮನಸ್ಸು ರಚನಾತ್ಮಕ, ನಿರಂತರ ಹರಿಯುವ ನೀರಿನಂತೆ ಇರಬೇಕು. ಬದುಕಿಗಾಗಿ ಸಂಪಾದನೆ ಹೊರತು, ಸಂಪಾದನೆಗಾಗಿ ಬದುಕು ಬೇಡ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡರೆ ನೆಮ್ಮದಿ ಜೀವನ ಸಾಗಿಸಬಹುದು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ಜೆ.ಎಸ್.ಎಸ್.ಸನ್ನಿಧಿ ಕಲಾಕ್ಷೇತ್ರದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ನಡೆದ ಪುನರ್ಮಿಲನ ಉದ್ಘಾಟಿಸಿ ಮಾತನಾಡಿದರು.

ಹಳೇ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮ ಮೂಲಕ ಹಲವು ವರ್ಷಗಳ ಬಳಿಕ ಗೆಳೆಯರನ್ನು ಭೇಟಿಯಾಗುವುದೇ ಒಂದು ವಿಶೇಷ ಹಾಗೂ ಸಂತಸದ ಕ್ಷಣ. ನಾವು ಸದಾ ಚಟುವಟಿಕೆಯಿಂದ ಕೂಡಿದ್ದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ. ಆಗ ಹೊಸ ಆಲೋಚನೆ ನಮ್ಮಲ್ಲಿ ಮೂಡಿದಾಗ ಇಂತಹ ಮಹತ್ವ ಪೂರ್ಣ ಕಾರ್ಯಕ್ರಮ ಮಾಡಬಹುದು. ವಿದ್ಯಾರ್ಥಿ ಜೀವನದ ತನ್ನ ಹಳೆಯ ನೆನಪುಗಳೊಂದಿಗೆ ಹೊಸ ಕನಸುಗಳು ಕಟ್ಟಿಕೊಂಡು ಹಲವು ಬದಲಾವಣೆಗಳ ಆಸಕ್ತಿ ಹೊಂದಿರಬೇಕು ಎಂದರು.

ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಸಂಸ್ಥೆಯ ಬಹು ದೊಡ್ಡ ಆಸ್ತಿ. ಅಂತಹ ಆಸ್ತಿಯನ್ನು ಜೆ.ಎಸ್‌ಎಸ್ ಸಂಸ್ಥೆ ಹೊಂದಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಕಾರಣ ಇಂಥ ಐತಿಹಾಸಿಕ ಕಾರ್ಯಕ್ರಮ ಸಾಧ್ಯವಾಗಿದೆ. ಮಹಾವಿದ್ಯಾಲಯದ ಆರಂಭದಿಂದ ಇಲ್ಲಿವರೆಗೂ ಕಲಿತು ಹೋಗಿರುವ ವಿದ್ಯಾರ್ಥಿಗಳ ಪುನರಮಿಲನ ಆಗಿರುವುದು ಸಂತೋಷ ತಂದಿದೆ ಎಂದರು.

ಸಮಾರಂಭದಲ್ಲಿ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗದ ನಿವೃತ್ತ ಹಾಗೂ ವೃತ್ತಿ ನಿರತ ಪ್ರಾಧ್ಯಾಪಕರಿಗೆ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಸೂರಜ್ ಜೈನ್, ಅರವಿಂದ ಜಮಖಂಡಿ, ರವಿಕುಮಾರ ಕಗ್ಗಣ್ಣವರ, ಸಂದೀಪ ಚಿಲಕವಾಡ, ವಿನೋದ ಹೆಗ್ಗಳಗಿ, ನಾಗರಾಜ ದೇಸಾಯಿ, ವಾದಿರಾಜ ನಾಗನೂರ, ರವಿ ಬಾಂಡಗೆ, ವಿಜಯ ಇನಾಮದಾರ, ಜಿತೇಂದ್ರ ನಾಡಗೇರ, ಶ್ರೀಕಾಂತ ಬೆಟಗೇರಿ, ಗಂಗಾಧರ ಎಚ್.ಕೆ, ಭಾರತಿ ಆರ್.ಕೆ, ಜಯಾ ಪಾಟೀಲ್ ಸೇರಿದಂತೆ ಹಳೇ ವಿದ್ಯಾರ್ಥಿಗಳು, ಗುರುಗಳು ವೇದಿಕೆಯಲ್ಲಿದ್ದರು.

ಪುನರ್ಮಿಲನ ಸಮಿತಿ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ನರಸಿಂಹರಾವ್ ಪ್ರಾಸ್ತಾವಿಕ ಮಾತನಾಡಿದರು. ಮೃಣಾಲ ಜೋಶಿ ನಿರೂಪಿಸಿದರು. ನಂತರ ಹಳೇ ವಿದ್ಯಾರ್ಥಿಗಳು ಕ್ಯಾಂಪಸ್ ರೌಂಡ್ ನಡೆಸಿ ಹಳೇ ನೆನಪುಗಳನ್ನು ಮೆಲಕು ಹಾಕಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.