ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ನಾನು ಕಳೆದ 40 ವರ್ಷಗಳಿಂದ ಗುರುಮಠಕಲ್ ಹಾಗೂ ಕಲಬುರಗಿ ಕ್ಷೇತ್ರದ ಜನರ ಜೋತೆ ಅವಿನಾಭಾವ ಸಂಬಂಧಗಳನ್ನು ಉಳಿಸಿಕೊಂಡು ಬರುವ ಮೂಲಕ ನನ್ನ ಹತ್ತಿರ ಬರುವ ಕಾರ್ಯಕರ್ತರೊಂದಿಗೆ, ಮಾತನಾಡುವುದು ಕಡಿಮೆ ಆದರೆ ಕೆಲಸ ಮಾಡುವುದು ಹೆಚ್ಚು ಪರಿಣಾಮ ನಿಮ್ಮೆಲ್ಲರ ಆಶೀರ್ವಾದ ಖಂಡಿತ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ ಎಂದು ಕೈ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮತ ಯಾಚಿಸಿದರು.ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಗುರುಮಠಕಲ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಈ ಭಾಗದ ಪ್ರಗತಿಗೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಾಬುರಾವ ಚಿಂಚನಸೂರ್ ನೀಡಿರುವ ಕೊಡುಗೆ ಅಪಾರವಾಗಿದೆ.
ಖರ್ಗೆ ಅವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಗುರುಮಠಕಲ್. ಈ ಹಿಂದೆ ಇದೇ ಕ್ಷೇತ್ರದ ಪಕ್ಷದ ಹಿರಿಯ 3 ಜನ ನಾಯಕರು ಸಂಸದರಾಗಿದ್ದರು. ನಾವು ಎಂದು ಈ ಭಾಗದ ಜನರನ್ನು ಮರೆತಿಲ್ಲ. ಅವರ ಕಷ್ಟ-ಸುಖಗಳಲ್ಲಿ ನಾವಿದ್ದೇವೆ. ನಾನು ಲೋಕಸಭೆಗೆ ಆಯ್ಕೆಯಾದರೆ, ಇಲ್ಲಿಂದ ಇಬ್ಬರು ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಇನ್ನು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿಪರ ಚಿಂತನೆ ಈ ಭಾಗದಲ್ಲಿ ಬೆಳವಣಿಗೆಯಾಗಲು ಸಹಕಾರಿಯಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ರಾಧಾಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರನ್ನು ನೀವು ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯದ ಜನರ ಅರ್ಥಿಕ, ಸಾಮಾಜಿಕ ಭದ್ರತೆ ಹಾಗೂ ಸ್ವಾಭಿಮಾನದ ಬದುಕಿಗಾಗಿ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿದೆ ಎಂದರು.ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಎಂ.ಎಲ್. ಸಿ. ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಮುಂತಾದವರಿದ್ದರು.
2 ಲಕ್ಷ ಮತಗಳ ಅಂತರದಿಂದ ರಾಧಾಕೃಷ್ಣ ಗೆಲವು: ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಧಾಕೃಷ್ಣ ಅವರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಾಬುರಾವ ಚಿಂಚನಸೂರ ಹೇಳಿದರು.ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಉಮೇಶ ಜಾಧವ ನನ್ನ ಮನೆಗೆ ಹಲವಾರು ಬಾರಿ ಆಗಮಿಸಿ, ನೀವು ಬಿಜೆಪಿ ಸೇರ್ಪಡೆಗೊಂಡರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ನಿಮ್ಮ ಸಮಾಜದ ಬಹುದಿನದ ಬೇಡಿಕೆಯಾದ ಎಸ್.ಟಿ ವರ್ಗಕ್ಕೆ ಸೇರ್ಪಡೆಗೊಳಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅದರಲ್ಲಿಯೇ 5 ವರ್ಷ ಕಾಲ ಕಳೆದು ಕೋಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸಮಾಜಕ್ಕೆ ಖರ್ಗೆ ಕುಟುಂಬದಿಂದ ಮಾತ್ರ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ನಾನು ಕ್ಷೇತ್ರದ ತುಂಬೆಲ್ಲಾ ಸಂಚಾರ ಮಾಡಿ, ಮತದಾರರಿಗೆ ತಿಳಿಸುವ ಮೂಲಕ ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿ, ರಾಧಾಕೃಷ್ಣ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.