ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಸಲ್ಲಿಸಿರುವ ಜನಗಣತಿ ವರದಿಯಲ್ಲಿ ಗಾಣಿಗ ಸಮಾಜವನ್ನು ಕೈಬಿಡಲಾಗಿದೆ. ಹಿಂದುಳಿದ ವರ್ಗದಲ್ಲಿಯೇ ಬಹುಸಂಖ್ಯಾತ ಆಗಿರುವ ಗಾಣಿಗ ಸಮಾಜದ ಅಂಕಿ ಸಂಖ್ಯೆಗಳನ್ನು ತೋರಿಸಿಲ್ಲ ಎಂದು ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಸಣ್ಣಪುಟ್ಟ ಸಮಾಜಗಳನ್ನೂ ಗುರುತಿಸಲಾಗಿದೆ. 50 ಲಕ್ಷಕ್ಕೂ ಅಧಿಕ ಇರುವ ಗಾಣಿಗ ಸಮಾಜವನ್ನು ಗುರುತಿಸದಿರುವುದು ಖೇದಕರ ಸಂಗತಿ. ವರದಿಯಲ್ಲಿ ಗಾಣಿಗ ಸಮಾಜವನ್ನು ಗುರುತಿಸದಿರುವುದು ವಿಫಲವಾಗಿದ್ದು, ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದರು. ಜಾತಿಗಣತಿ ವರದಿ ತಯಾರಿಸುವಾಗ ಯಾರೊಬ್ಬರೂ ಗಾಣಿಗ ಸಮಾಜದವರ ಮನೆಗೆ ಬಂದಿಲ್ಲ. ಈ ಕುರಿತು ಆಯೋಗ ಮಾಹಿತಿ ಪಡೆದಿಲ್ಲ ಎಂದರು.
ಇಂತಹ ಸಮಾಜವನ್ನು ಗುರುತಿಸದಿರುವುದು ಖಂಡನೀಯ. ಇನ್ನು ಈ ವರದಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಯಾವುದೇ ನಿರ್ಣಯ ಮಾಡಬಾರದು. ಅಂಕಿಸಂಖ್ಯೆ ತಪ್ಪಾಗಿರುವ ಈ ವರದಿಯನ್ನು ನಂಬಿ ಏನಾದರೂ ನಿರ್ಣಯಗಳನ್ನು ಮಾಡಿದ್ದೇ ಆದರೆ, ಗಾಣಿಗ ಸಮಾಜ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುತ್ತದೆ ಎಂದು ಲೋಣಿ ಎಚ್ಚರಿಸಿದ್ದಾರೆ. ನಾವು ಇಷ್ಟಕ್ಕೆ ಸುಮ್ಮನಾಗದೆ ನ್ಯಾಯಾಲಯದ ಮೊರೆ ಹೋಗಿ ಈ ವರದಿಯನ್ನು ಜಾರಿ ಮಾಡದಂತೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.ನಿಗಮ ಮಂಡಳಿಯಲ್ಲೂ ಅನ್ಯಾಯ:
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಈಗಾಗಲೇ ಹಲವು ಬಾರಿ ಸಮಾಜಕ್ಕೆ ಅನ್ಯಾಯವಾಗಿರುವ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಮತ್ತೆ ಗಾಣಿಗರಿಗೆ ಒಂದೇ ಒಂದು ನಿಗಮ ಮಂಡಳಿ ಕೊಟ್ಟಿಲ್ಲ. ನೂತನವಾಗಿ ಆಯ್ಕೆ ಮಾಡಿದ ಹಲವು ನಿಗಮ ಮಂಡಳಿಗಳಲ್ಲಿಯೂ ಗಾಣಿಗ ಸಮಾಜದ ಒಬ್ಬರನ್ನೂ ನೇಮಿಸಿಲ್ಲ. ಇದು ಸಹ ಸಮಾಜಕ್ಕೆ ಮತ್ತೆ ಅನ್ಯಾಯವಾಗಿದೆ, ಈಗ ಆಗಿರುವ ಅನ್ಯಾಯವನ್ನು ಕಾಂಗ್ರೆಸ್ ನಾಯಕರು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕಾಂಗ್ರೆಸ್ ಪಕ್ಷ ನಮ್ಮ ಸಮಾಜದ ಒಬ್ಬರನ್ನೂ ಶಾಸಕರನ್ನಾಗಿ ಮಾಡಿಲ್ಲ. ಹಿಂದುಳಿದ ಸಮಾಜಕ್ಕೆ ಸರ್ಕಾರದಿಂದ ಹಾಗೂ ಆಯೋಗದಿಂದ ಅನ್ಯಾಯವಾದರೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ಅಖಿಲ ಭಾರತ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಸಮಾಜದ ಅಂಕಿ ಅಂಶಗಳ ಪ್ರಕಾರ ವರದಿಯಲ್ಲಿ ಉಲ್ಲೇಖ ಆಗಿಲ್ಲ. ಅದನ್ನು ಇಟ್ಟುಕೊಂಡು ಈಗಿನ ಸರ್ಕಾರ ಅನ್ಯಾಯ ಮಾಡುತ್ತಿದೆ. ಇದೇ ರೀತಿ ಮುಂದುವರೆದರೆ ಸಮಾಜದ ಜರರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ನಾವು ಸುಮ್ಮನೆ ಇರುವುದಿಲ್ಲ. ಈ ವಿಚಾರವಾಗಿ ಕಾನೂನು ಹೋರಾಟ ಸಹ ನಾವು ಮಾಡಲಿದ್ದೇವೆ. ನಮ್ಮ ಸಮಾಜಕ್ಕೆ ಇದುವರೆಗೂ ಸಚಿವ ಸ್ಥಾನಗಳು ಸಿಕ್ಕಿಲ್ಲ. ನಿಗಮ ಮಂಡಳಿಗೂ ಆಯ್ಕೆ ಮಾಡಿಲ್ಲ. ತಕ್ಷಣವೇ ಅನ್ಯಾಯ ಸರಿಪಡಿಸದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಹೀಗೆ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯಿಂದಲೂ ಅನ್ಯಾಯ ಮಾಡುತ್ತಿದೆ ಎಂಬ ಭಾವನೆ ನಮ್ಮ ಸಮಾಜದ ಜನರಲ್ಲಿ ಉದ್ಭವ ಆಗುತ್ತಿದೆ ಎಂದು ಅವರು ಹೇಳಿದರು.
ಈ ವೇಳೆ ಡಾ.ಬಾಬು ಸಜ್ಜನ, ಸಿ.ಎಸ್.ಬಿರಾದಾರ, ಬಿ.ಕೆ.ಚೌಧರಿ, ಈಶ್ವರ ಶಿರಾಡೋಣ, ಮದನ ಲೋಣಿ ಸೇರಿದಂತೆ ಸಮಾಜದ ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))