ಸಾರಾಂಶ
ತುಮಕೂರು: ಮಿನಿ ಮ್ಯಾರಥಾನ್ ಓಟದಲ್ಲಿ 600 ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್ ತಿಳಿಸಿದರು. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೇಜರ್ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಿನಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.ಮೇಜರ್ ಧ್ಯಾನ್ ಚಂದ್ ಅವರ ಸ್ಮಾರಣಾರ್ಥ ದೇಶದಾದ್ಯಾಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಧ್ಯಾನ್ ಚಂದ್ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹಾಕಿ ಮಾಂತ್ರಿಕ ಎಂದು ಮನ್ನಣೆ ಪಡೆದಿದ್ದಾರೆ ಎಂದು ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡ ಮ್ಯಾರಥಾನ್ ಓಟ ನಗರದ ಎಸ್.ಎಸ್.ವೃತ್ತ, ಬಿ.ಎಚ್.ರಸ್ತೆ, ಎಸ್‌ಐಟಿ ಮುಖ್ಯರಸ್ತೆ, ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ, ರಾಧಾಕೃಷ್ಣ ರಸ್ತೆ, ಭದ್ರಮ್ಮ ಛತ್ರ ವೃತ್ತ, ಕೆ.ಆರ್.ಬಡಾವಣೆ, ಕೋತಿತೋಪು ಮುಖ್ಯರಸ್ತೆ ಮೂಲಕ ಕ್ರೀಡಾಂಗಣಕ್ಕೆ ತಲುಪಿತು.
ಮ್ಯಾರಥಾನ್ ಓಟದಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನ ಸುಮಾರು ೬೦೦ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕ್ರೀಡಾಪಟುಗಳು ಭಾಗವಹಿಸಿದ್ದು, ಓಟದಲ್ಲಿ ವಿಜೇತರಾದ 6 ವಿದ್ಯಾರ್ಥಿ, 6 ವಿದ್ಯಾರ್ಥಿನಿಯರಿಗೆ ಪದಕ ನೀಡಲಾಯಿತು. ನಗದು ಬಹುಮಾನವನ್ನು ವಿಜೇತರ ಖಾತೆಗೆ ಜಮಾ ಮಾಡಲಾಗುವುದು. ಓಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮೇಜರ್ ದ್ಯಾನ್ ಚಂದ್ ಅವರ ಹೆಸರಿನಲ್ಲಿ ವಿದೇಶಗಳಲ್ಲಿ ಕ್ರೀಡಾಂಗಣ, ಪ್ರತಿಮೆ, ರಸ್ತೆಗಳನ್ನು ಕಾಣಬಹುದಾಗಿದೆ. ಪೋಷಕರು ತಮ್ಮ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡಬೇಕು. ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಯಲ್ಲಿ ಕ್ರೀಡೆಯಲ್ಲೂ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಮ್ಯಾರಥಾನ್‌ನಲ್ಲಿ ವಿಜೇತರಾದ ಬೆಂಗಳೂರಿನ ವೈಭವ್ ಮಾರುತಿ ಪಾಟೀಲ್, ತುಮಕೂರಿನ ಅವಾದುಶ್ ನಿಶಾದ್, ಹೆಚ್.ಎ. ದರ್ಶನ್, ಉಜಿರೆಯ ಜೆ.ಆರ್. ದರ್ಶನ್, ಕುಣಿಗಲ್‌ನ ಸಿ.ಕೆ. ಗಿರೀಶ್ ಹಾಗೂ ಚಿಕ್ಕಣ್ಣ ಹಾಗೂ ಕ್ರೀಡಾ ವಸತಿ ನಿಲಯದ ಮಹಾದೇವಿ, ಭೀಮಬಾಯಿ, ಎನ್.ಡಿ. ಪುಣ್ಯ, ಎ.ಆರ್. ಜೀವಿತ, ಪಿ.ಎಂ. ಮೈನಾಂಕಿತ, ತಾನ್ವಿ ಅವರಿಗೆ ಪದಕ ಪ್ರದಾನ ಮಾಡಲಾಯಿತು.ಸರ್ಕಾರಿ ನೌಕರರ ಸಂಘ ಅಧ್ಯಕ್ಷ ನರಸಿಂಹರಾಜು, ಓಲೆ ಚಂದ್ರಣ್ಣ, ಹಿರಿಯ ಆಟಗಾರ ಪ್ರದೀಪ್, ಹಿರಿಯ ಕ್ರೀಡಾಪಟು ಜಗದೀಶ್, ಪ್ರೌಢ ಶಾಲೆ ದೈಹಿಕ ಶಿಕ್ಷಣ ಇಲಾಖೆ ಅಧ್ಯಕ್ಷ ಬಸವರಾಜು, ತರಬೇತುದಾರರಾದ ಶಿವಪ್ರಕಾಶ್, ಮೊಹಮದ್ ಇಸ್ಮಾಯಿಲ್, ಸುಧೀರ್ ದೇವದಾಸ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.