ಸಾರಾಂಶ
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಯು ವ್ಯಾಸನಕೆರೆ ಗಣಿ ಕಬ್ಬಿಣದ ಅದಿರಿನ ಗಣಿಯಲ್ಲಿ ಉದ್ದೇಶಿತ ಗಣಿಗಾರಿಕೆ ನಡೆಸಲು ಇಲ್ಲಿಗೆ ಸಮೀಪದ ವ್ಯಾಸನಕೆರೆ ಗ್ರಾಮದ ಆರಣ್ಯ ಪ್ರದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಪರಿಸರ ಇಲಾಖೆಯು ಸಾರ್ವಜನಿಕ ಸಭೆ ನಡೆಸಿತು.
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಯು ವ್ಯಾಸನಕೆರೆ ಗಣಿ ಕಬ್ಬಿಣದ ಅದಿರಿನ ಗಣಿಯಲ್ಲಿ ಉದ್ದೇಶಿತ ಗಣಿಗಾರಿಕೆ ನಡೆಸಲು ಇಲ್ಲಿಗೆ ಸಮೀಪದ ವ್ಯಾಸನಕೆರೆ ಗ್ರಾಮದ ಆರಣ್ಯ ಪ್ರದೇಶದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಪರಿಸರ ಇಲಾಖೆಯು ಸಾರ್ವಜನಿಕ ಸಭೆ ನಡೆಸಿತು.ಸಭೆಯಲ್ಲಿ ವ್ಯಾಸನಕೆರೆ ಕಬ್ಬಿಣ ಅದಿರಿನ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೆಲವೇ ಜನರು ಮಾತ್ರ ವಿರೋಧ ವ್ಯಕ್ತಪಡಿಸಿದ್ದು ಹೊರತುಪಡಿಸಿದರೆ, ಈ ಸಭೆಗೆ ಆಗಮಿಸಿದ ಬಹುತೇಕ ಜನರು, ಮತ್ತು ಸಂಘ-ಸಂಸ್ಥೆಗಳು ಗಣಿಗಾರಿಕೆಗೆ ಒಪ್ಪಿಗೆ ವ್ಯಕ್ತಪಡಿಸಿದರು.
ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಯವರು ಇಲ್ಲಿನ ಕಬ್ಬಿಣ ಅದಿರಿನ ಗಣಿಯಲ್ಲಿ ವಾರ್ಷಿಕ 1.8 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯದ ಕಬ್ಬಿಣ ಅದಿರಿನ ಗಣಿಗಾರಿಕೆ (ಗರಿಷ್ಠ ಉತ್ಪನ್ನವು 7.1 ಮಿಲಿಯನ್ ಟಿಪಿಎವರೆಗೆ ಇದ್ದು. ಇದರಲ್ಲಿ 1.8 ಮಿಲಿಯನ್ ಟಿಎಪಿ ಕಬ್ಬಿಣದ ಅದಿರು ಮತ್ತು 5.3 ಮಿಲಿಯನ್ ಟಿಎಪಿ ತ್ಯಾಜ್ಯ ಸೇರಿದೆ) ಯೋಜನೆಯನ್ನು ಒಟ್ಟು 405.4 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ (ಇದರಲ್ಲಿ ಹಿಂದಿನ ಎರಡು ಗಣಿ ಗುತ್ತಿಗೆಗಳ 354.56 ಹೆಕ್ಟೇರ್ ಮತ್ತು 32.72 ಹೆಕ್ಟೇರ್ ಮತ್ತು ಮೂಲರೂಪದ ಪ್ರದೇಶ 18.12 ಹೆಕ್ಟೇರ್ ವಿಲೀನಗೊಳಿಸಿದೆ) ಕೈಗೊಳ್ಳಲು ಉದ್ದೇಶಿಸಿರುವ ಕುರಿತು ಪರಿಸರ ಸಾರ್ವಜನಿಕ ಅಲಿಕೆ ಕುರಿತು ಸಾರ್ವಜನಿಕರ ಸಭೆ ನಡೆಸಿದರು.ಗಣಿಗಾರಿಕೆಯ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಹುತೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,114 ಡಣಾಪುರ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಸಂಘದ ಮುಖಂಡರು, ಮಹಿಳಾ ಜನಪ್ರತಿನಿಧಿಗಳು, ಸ್ವಸಹಾಯ ಸಂಘದ ಮಹಿಳೆಯರು ಗಣಿಗಾರಿಕೆಗೆ ಸಹಮತ ವ್ಯಕ್ತಪಡಿಸಿ ಸಭೆಯಲ್ಲಿ ಮನವಿ ಸಲ್ಲಿಸಿದರು.
ಈ ಸಂಧರ್ಭ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ, ಪರಿಸರ ಅಧಿಕಾರಿ ಮೀನಾಕ್ಷಿ ಹಾಗೂ ಕಂದಾಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.