ಕೆಯುಡಬ್ಲ್ಯೂಎಸ್‌ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಭೈರತಿ ಸುರೇಶ್‌ ಸೂಚನೆ

| Published : Jun 20 2024, 01:09 AM IST

ಕೆಯುಡಬ್ಲ್ಯೂಎಸ್‌ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಭೈರತಿ ಸುರೇಶ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಹಾಗೂ ಒಳ ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಇಗೆ ಸಸ್ಪೆಂಡ್‌ । ಎಇಇ ವರ್ಗಾವಣೆಗೆ ಸೂಚನೆ । ಚಿಕ್ಕಮಗಳೂರಿನ ಒಳಚರಂಡಿ- ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಅಸಮರ್ಪಕ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಹಾಗೂ ಒಳ ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಸಮರ್ಪಕ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸೂಕ್ತ ಮಾಹಿತಿ ನೀಡದೆ ಸಭೆಯಿಂದ ಹೊರಗಡೆ ನಿಂತ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸಸ್ಪಂಡ್ ಗೆ ಹಾಗೂ ಎಇಇ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು.

ಸಭೆ ಆರಂಭದಲ್ಲಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಅವರು, ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ಯಗಚಿ ಡ್ಯಾಮ್ ನಲ್ಲಿ ಅಳವಡಿಸಿರುವ ಎರಡು ಮೋಟಾರ್ ಗಳಲ್ಲಿ ಒಂದು ದುರಸ್ತಿಗೆ ಬಂದಿದೆ. ಇನ್ನು ಮುಗುಳವಳ್ಳಿಯಲ್ಲಿ ಅಳವಡಿಸಿರುವ ಮೋಟಾರ್ ಗಳು ಸಹ ಹಾಳಾಗಿವೆ ಎಂದು ಸಭೆ ಗಮನ ಸೆಳೆದರು.

ಈ ವೇಳೆ ಸಭೆಗೆ ಮಾಹಿತಿ ನೀಡಿದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಮೋಟಾರ್ ಗಳು ಪದೇ ಪದೇ ಕೈ ಕೊಡುತ್ತಿರುವುದರಿಂದಾಗಿ ಹೊಸ ಜಾಕ್ ವೆಲ್ ಹಾಗೂ ಹೊಸ ಮೋಟರ್ ಕೂಡ ಅಳವಡಿಕೆಗೆ ಪ್ರಸ್ತಾವನೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್ ಒಟ್ಟು ಯೋಜನಾ ವೆಚ್ಚ ಎಷ್ಟು ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ವಿಫಲರಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 35 ಕೋಟಿ ರು.ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಇದರಲ್ಲಿ 7 ಕೋಟಿ ರು. ಹಣವನ್ನು ಚಿಕ್ಕಮಗಳೂರಿನ ವಿವಿಧ ಎತ್ತರದ ಪ್ರದೇಶದಲ್ಲಿರುವ ಬಡಾವಣೆಗಳಿಗೆ ನೀರೊದಗಿಸಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಶಾಸಕ ತಮ್ಮಯ್ಯ ಮಾತನಾಡಿ, 2018 ರಲ್ಲಿ ಯಗಚಿ ಡ್ಯಾಮ್ ನಲ್ಲಿ ಹಾಗೂ ಮುಗುಳು ವಳಿಯಲ್ಲಿ ಅಳವಡಿಸಲು ಪಂಪುಗಳನ್ನು ಖರೀದಿ ಮಾಡಲಾಗಿತ್ತು. ಆದರೆ, 2019 ರಲ್ಲಿ ಪಂಪುಗಳ ವಾರಂಟಿ ಮುಗಿದಿದೆ. ವಾರಂಟಿ ಮುಗಿದ ಬಳಿಕ 2019-20 ರಲ್ಲಿ ಪಂಪುಗಳನ್ನು ಅಳವಡಿಕೆ ಮಾಡಲಾಗಿದೆ. ಹೀಗಾಗಿ ನಗರಕ್ಕೆ ನೀರು ಒದಗಿಸುವ ಪಂಪುಗಳು ದುರಸ್ತಿಗೆ ಬಂದಲ್ಲಿ ಸ್ಥಳೀಯ ಆಡಳಿತದಿಂದಲೇ ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಪಂಪುಗಳು ಕೈಕೊಟ್ಟಲ್ಲಿ ನಗರಕ್ಕೆ ಕನಿಷ್ಠ ಒಂದು ತಿಂಗಳು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನು ನಗರದ ಯುಜಿಡಿ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನೀನಾ ನಾಗರಾಜ್ ನಗರದ ಎಂಟು ವಾರ್ಡ್‌ಗಳಲ್ಲಿ ಮ್ಯಾನ್ ಹೋಲ್ ಗಳು ಸಂಪೂರ್ಣವಾಗಿ ಕುಸಿದು ಹೋಗಿವೆ. ಇನ್ನುಳಿದ ಕಡೆಗಳಲ್ಲಿ ಮ್ಯಾನ್ ಹೋಲ್ ಗಳಲ್ಲಿ ನೀರು ರಸ್ತೆ ಮೇಲೆಯೇ ಉಕ್ಕುತ್ತಿದೆ. ನಗರದಲ್ಲಿನ ಯುಜಿಡಿ ವ್ಯವಸ್ಥೆ ಸರಿ ಪಡಿಸಲು ತಜ್ಞರ ಸಲಹೆ ಪಡೆಯುವುದು ಅನಿವಾರ್ಯ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಎಚ್. ಡಿ.ತಮ್ಮಯ್ಯ, 2012ರಲ್ಲಿ ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭ ಮಾಡಲಾಗಿತ್ತು. 2019ರಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು. ಇದೀಗ ಯುಜಿಡಿ ಸಮಸ್ಯೆ ಕಾಣಿಸಿ ಕೊಂಡಿದೆ. ಆದರೆ ನಗರಸಭೆ ಬಳಿಯಾಗಲಿ ಅಥವಾ ಅಧಿಕಾರಿಗಳ ಬಳಿಯಾಗಲಿ, ಯುಜಿಡಿ ಕಾಮಗಾರಿ ಮಾಸ್ಟರ್ ಪ್ರಿಂಟ್ ಡ್ರಾಯಿಂಗ್ ಇಲ್ಲ. ಹೀಗಿರುವಾಗ ಸ್ಟ್ರೈಟ್ ಲೈನ್ ಎಲ್ಲಿ ಹಾದು ಹೋಗಿದೆ ಬೆಂಡ್ ಎಲ್ಲಿದೆ ಎಂಬುದು ನಗರ ಸಭೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲಾ ಅಂಶಗಳಿಂದ ಕೆಂಡಾಮಂಡಲರಾದ ಸಚಿವ ಭೈರತಿ ಸುರೇಶ್ , ಇನ್ನು 3 ತಿಂಗಳ ಒಳಗಾಗಿ ನಗರದ ಯುಜಿಡಿ ವ್ಯವಸ್ಥೆ ಸರಿ ಪಡಿಸಬೇಕು. ಸಭೆಗೆ ಆಗಮಿಸದೆ ಹೊರಗೆ ಇದ್ದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸಸ್ಪಂಡ್ ಮಾಡಬೇಕು ಹಾಗೂ ಸಭೆಗೆ ಸಮರ್ಪಕ ಮಾಹಿತಿ ನೀಡಿದ ಇಲಾಖೆ ಎಇಇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಇಲಾಖೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ ಪಟ್ಟಣಗಳಲ್ಲಿಯೂ ತುರ್ತಾಗಿ ಯುಜಿಡಿ ಕಾಮಗಾರಿ ಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 19 ಕೆಸಿಕೆಎಂ 4ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಬುಧವಾರ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.