ಸಾರಾಂಶ
ಪ್ರವಾಹ ಪೀಡಿತ ಪ್ರದೇಶ ಚೇರಿಯಪರಂಬುವಿಗೆ ಕೊಡಗು ಉಸ್ತುವಾರಿ ಸಚಿವ ಭೋಸರಾಜು ಭೇಟಿ ನೀಡಿದರು. ನಾಪೋಕ್ಲು -ಕಲ್ಲು ಮೊಟ್ಟೆಗೆ ರಸ್ತೆ ಸಂಪರ್ಕಕ್ಕೆ ನೂತನವಾಗಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಪರಿಸರವನ್ನು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಅತಿವೃಷ್ಟಿಯಿಂದ ಜಲಾವೃತವಾಗುವ ಪ್ರದೇಶಗಳಲ್ಲಿ ವಾಸಿಸುವ ಮಂದಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಉಸ್ತುವಾರಿ ಸಚಿವ ಭೋಸರಾಜು ಹೇಳಿದರು.ಪ್ರವಾಹ ಪೀಡಿತ ಪ್ರದೇಶ ಚೇರಿಯಪರಂಬುವಿಗೆ ಶುಕ್ರವಾರ ಭೇಟಿ ನೀಡಿ, ಪ್ರವಾಹದಲ್ಲಿ ಮುಳುಗಡೆಯಾಗುವ ನಾಪೋಕ್ಲು -ಕಲ್ಲು ಮೊಟ್ಟೆಗೆ ರಸ್ತೆ ಸಂಪರ್ಕಕ್ಕೆ ನೂತನವಾಗಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಪರಿಸರವನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲ ಮುಗಿದ ನಂತರ ರಸ್ತೆ ಎತ್ತರಿಸುವ ಕಾಮಗಾರಿ ಮುಂದುವರಿಸಲಾಗುವುದು. ಮುಂದಿನ ವರ್ಷ ರಸ್ತೆ ಸಂಪರ್ಕಕ್ಕೆ ಯಾವುದೇ ಸಮಸ್ಯೆ ಉದ್ಭವಿಸದು. ಕಳಪೆ ಕಾಮಗಾರಿ ಬಗ್ಗೆ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ತಜ್ಞರ ಮಾರ್ಗದರ್ಶನದಲ್ಲಿ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿ ಉತ್ತಮ ಗುಣಮಟ್ಟದ ರಸ್ತೆ, ಸೇತುವೆ ನಿರ್ಮಿಸಲಾಗುತ್ತಿದೆ. ಕಳೆದ ಬಾರಿ ಕುಸಿತವಾಗಿದ್ದ ಕುಟ್ಟ ಮತ್ತು ಕೆದಮುಳ್ಳೂರು ಭಾಗದ ರಸ್ತೆಗಳನ್ನು ಪುನರ್ ನಿರ್ಮಿಸಲಾಗಿದೆ. ಉತ್ತಮಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಮಾಜಿ ಉಪಾಧ್ಯಕ್ಷೆ ಕುಲೇಟಿರ ಹೇಮಾ ಅರುಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾರ್ಮಿಕ ಘಟಕ ಉಪಾಧ್ಯಕ್ಷ ಪರವಂಡ ಮಿರ್ಷದ್, ಯೂಥ್ ಕಾಂಗ್ರೆಸ್ ಮುಖಂಡ ಡಾ. ಚೆರುಮಂದಂಡ ಸೋಮಣ್ಣ, ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ವಲಯಾಧ್ಯಕ್ಷ ಮಾಚೇಟಿರ ಕುಸು ಕುಶಲಪ್ಪ, ಕಂದಾಯ ಪರಿವೀಕ್ಷಕ ರವಿ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೊ೦ದಕ್ಕಿ, ಕಾಂಗ್ರೆಸ್ ಕಾರ್ಯಕರ್ತ ಪಿ.ಯು ರಜಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.