ಕೊಡಗು ವಿವಿಗೆ ಸಚಿವ ಭೋಸರಾಜು ಭೇಟಿ, ಪ್ರಗತಿ ಪರಿಶೀಲನೆ
KannadaprabhaNewsNetwork | Published : Oct 18 2023, 01:01 AM IST
ಕೊಡಗು ವಿವಿಗೆ ಸಚಿವ ಭೋಸರಾಜು ಭೇಟಿ, ಪ್ರಗತಿ ಪರಿಶೀಲನೆ
ಸಾರಾಂಶ
ಕೊಡಗು ವಿಶ್ವವಿದ್ಯಾಲಯಕ್ಕೆ ಕೊಡಗು ಜಿಲ್ಲೆ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕೊಡಗು ವಿಶ್ವವಿದ್ಯಾಲಯಕ್ಕೆ ಕೊಡಗು ಜಿಲ್ಲೆ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅವರು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂ. ಆಲೂರ ಅವರು ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿಯ ಸಂಪೂರ್ಣ ವಿವರವನ್ನು ಸಚಿವರಿಗೆ ಒದಗಿಸಿದರು. ಕೌಶಲ್ಯಾಧರಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಲುವಾಗಿ ರಾಜ್ಯದ ನೂತನ ವಿಶ್ವವಿದ್ಯಾಲಯಗಳನ್ನು ಕರ್ನಾಟಕ ಸರ್ಕಾರವು ಸ್ಥಾಪನೆ ಮಾಡಿದೆ. ಕೊಡಗು ಜಿಲ್ಲೆಯ ಜನರ ಬಹುಕಾಲದ ಕನಸಾದ ಕೊಡಗು ವಿಶ್ವವಿದ್ಯಾಲಯವು ಸಹ ಅವುಗಳಲ್ಲಿ ಒಂದಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿರುವಂತೆ ಕೊಡಗಿಗೆ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂಬ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡಗು ವಿಶ್ವವಿದ್ಯಾಲಯವು ಕಾರ್ಯರಂಭ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮನ್ನಿಸಿತ್ತು. ಕಳೆದ ವರ್ಷ ನೂತನ ವಿಶ್ವವಿದ್ಯಾಲಯಗಳೊಂದಿಗೆ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ ಮಾಡಿರುವ ಬಗ್ಗೆ ವಿವರ ಒದಗಿಸಿದರು. ಕೊಡಗು ವಿಶ್ವವಿದ್ಯಾಲಯದ ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 75ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ನವೀನ ರೀತಿಯಲ್ಲಿ ಉನ್ನತೀಕರಣಗೊಳಿಸುವುದು, ಕೊಠಡಿಗಳ ಸಂಖ್ಯೆ ಹೆಚ್ಚಿಸುವುದು, ಕೋರ್ಸ್ ಗಳನ್ನು ಪರಿಚಯಿಸುವುದು ಮತ್ತಿತರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕುಲಪತಿಗಳು ಉಸ್ತುವಾರಿ ಸಚಿವರಿಗೆ ವಿವರ ಒದಗಿಸಿದರು. ಮಾದರಿ ವಿವಿಯಾಗಿಸಲು ಗುರಿ: ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಶ್ರೇಯೋಭಿವೃದ್ಧಿಗಾಗಿ ಸಂಶೋಧನಾಧರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ವಿವಿಧ ಧನ ಸಹಾಯ ಸಂಸ್ಥೆಗಳಿಂದ ಯೋಜನೆಗಳನ್ನು ಪಡೆಯಲು ಕ್ರಮವಹಿಸಲಾಗುತ್ತಿದೆ. ಕೊಡಗು ವಿಶ್ವವಿದ್ಯಾಲಯವನ್ನು ರಾಜ್ಯದಲ್ಲೇ ಮಾದರಿ ವಿಶ್ವವಿದ್ಯಾಲಯ ಮಾಡುವ ಗುರಿ ಹೊಂದಲಾಗಿದೆ ಎಂದು ಉಸ್ತುವಾರಿ ಸಚಿವರಿಗೆ ಮಾಹಿತಿ ಒದಗಿಸಿದರು. ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ, ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ, ಪ್ರಾಧ್ಯಾಪಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಈ ಸಂದರ್ಭ ಸಭೆಯಲ್ಲಿ ಇದ್ದರು.