ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ದಾಸ ಸಾಹಿತ್ಯಕ್ಕೆ ವೈಚಾರಿಕೆ ನೆಲೆಗಟ್ಟನ್ನು ಒದಗಿಸಿದ ಭಕ್ತ ಶ್ರೇಷ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಕ್ಲಿಷಕರ ಹಾಗೂ ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಚಾರಿಕೆ ಪ್ರಜ್ಞೆ ಬೆಳೆಸಿದ ಕನಕದಾಸರ ತತ್ವಾದರ್ಶಗಳು ದಾರಿದೀಪವಾಗಿವೆ. ದೇಶದ ಭವ್ಯವಾದ ಸಂಸ್ಕೃತಿ, ಪರಂಪರೆ ಇಲ್ಲಿನ ದಾರ್ಶನಿಕರ ವಿಚಾರಧಾರೆಗಳನ್ನು ಅವರ ಚಿಂತನೆಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದ್ದೆ. ಇಂತಹ ಶ್ರೇಷ ಸಂತರು, ಸತ್ಪುರುಷರು ದೇಶ, ನಾಡನ್ನು ಬೆಳಗಿದ್ದಾರೆ ಎಂದು ಹೇಳಿದರು.ಸಂತ ಶ್ರೇಷ ಸೇರಿದಂತೆ ಮಹಾತ್ಮರ ವಿಚಾರಧಾರೆಗಳಂತೆ ಸರ್ಕಾರ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ೨೦೧೩ರಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯದಂತಹ ಅನೇಕ ಜನಪರ ಹಾಗೂ ಬಡವರ ಪರ ಯೋಜನೆಗಳನ್ನು ಜಾರಿಗೆ ತಂದು, ಬಡವರ ಬಾಳಿನ ಬೆಳಕಾಗಿದ್ದರು. ಪ್ರಸ್ತುತ ನಮ್ಮ ಸರ್ಕಾರ ೫ ಗ್ಯಾರಂಟಿಗಳ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದರು.
ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಸ್ತ್ರೀ ಸ್ವಾವಲಂಬನೆಯ ದಿಟ್ಟ ಹೆಜ್ಜೆಯನ್ನಿಡಲಾಗಿದೆ. ಉಚಿತ ಪ್ರಯಾಣದಿಂದ ಬಹಳಷ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಆಸರೆ ದೊರಕಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ೨ ಸಾವಿರ ರೂ. ಬ್ಯಾಂಕ್ ಖಾತೆಗೆ ಒದಗಿಸುವ ಮೂಲಕ ಜನರ ಜೀವನಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆಯಿಂದ ಹಲವರ ಬದುಕಿನಲ್ಲಿ ಆಶಾಕಿರಣ ಮೂಡಿದ್ದು, ಎಲ್ಲ ವರ್ಗದ ಜನರ ಆರ್ಥಿಕ ಸ್ವಾವಲಂಬನೆ ತಂದು ಕೊಡುವಲ್ಲಿ ಯೋಜನೆಗಳು ಜನಪರವಾಗಿವೆ ಎಂದು ಹೇಳಿದರು.ನ್ಯಾಯವಾದಿ ವಿದ್ಯಾವತಿ ಅಂಕಲಗಿ ಮಾತನಾಡಿ, ಕನಕದಾಸರ ರಚನೆಯ ಮೋಹನ ತರಂಗಿಣಿ, ನಳಚರಿತ್ರೆ, ಸಾಹಿತ್ಯದ ಕುರಿತು ಅವಲೋಕಿಸಿದ ಅವರು, ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜನರಲ್ಲಿ ವೈಚಾರಿಕ ಮನೋಭಾವ ಬೆಳೆಸುವಲ್ಲಿ ಕನಕದಾಸರ ಕೀರ್ತನೆಗಳು ಅಪಾರ ಕೊಡುಗೆಯಾಗಿವೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಉಪಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಸಮಾಜದ ಮಲ್ಲಣ್ಣ ಶಿರಶ್ಯಾಡ ಮುಂತಾದವರು ಇದ್ದರು.ಕಾರ್ಯಕ್ರಮದ ಮುಂಚೆ ನಗರದ ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು.