ಕೋಟಿ ವೆಚ್ಚದ ಕಟ್ಟಡ ಕೆಲವೇ ಕ್ಷಣಗಳಲ್ಲಿ ಉದ್ಘಾಟಿಸಿ ತೆರಳಿದ ಸಚಿವ ಗುಂಡೂರಾವ್‌!

| Published : Dec 22 2024, 01:31 AM IST

ಕೋಟಿ ವೆಚ್ಚದ ಕಟ್ಟಡ ಕೆಲವೇ ಕ್ಷಣಗಳಲ್ಲಿ ಉದ್ಘಾಟಿಸಿ ತೆರಳಿದ ಸಚಿವ ಗುಂಡೂರಾವ್‌!
Share this Article
  • FB
  • TW
  • Linkdin
  • Email

ಸಾರಾಂಶ

ಶನಿವಾರ ಮಧ್ಯಾಹ್ನ ೩.೩೦ರ ವೇಳೆಗೆ ಸಚಿವರು ಧಾವಿಸಿ ಬಂದವರೇ ರಿಬ್ಬನ್ ಕತ್ತರಿಸಿ , ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆದು ನಿರ್ಗಮಿಸಿದರು. ಉದ್ಘಾಟನಾ ಸಭಾ ಕಾರ್ಯಕ್ರಮಕ್ಕೆಂದು ಸಿದ್ಧತೆ ಮಾಡಿಕೊಂಡಿದ್ದ ಇಲಾಖಾಧಿಕಾರಿಗಳು ಸಭಾ ಕಾರ್ಯಕ್ರಮ ನಡೆಸಲಾಗದೆ ನಿರಾಸೆಗೆ ಒಳಗಾದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆಯ ವತಿಯಿಂದ ಉಪ್ಪಿನಂಗಡಿಯಲ್ಲಿ ೫ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನುಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಿರ್ಗಮಿಸಿದರು. ಸಚಿವ ಈ ನಡೆಯಿಂದಾಗಿ ಪಕ್ಷದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಯಿತು. ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ೧೦೦ ಮಂದಿ ಸಾಮರ್ಥ್ಯದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ೫ ಕೋಟಿ ರು. ವೆಚ್ಚದಲ್ಲಿ ೧೮ ತಿಂಗಳ ಕಾಲವಕಾಶದಲ್ಲಿ ಮೂರು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಲೋಕಾರ್ಪಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸಮಯಾನುಕೂಲತೆ ಗಮನಿಸಿ ಶನಿವಾರದಂದು ದಿನಾಂಕ ನಿಗದಿಪಡಿಸಲಾಗಿತ್ತು. ಶನಿವಾರ ಮಧ್ಯಾಹ್ನ ೩.೩೦ರ ವೇಳೆಗೆ ಸಚಿವರು ಧಾವಿಸಿ ಬಂದವರೇ ರಿಬ್ಬನ್ ಕತ್ತರಿಸಿ , ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆದು ನಿರ್ಗಮಿಸಿದರು. ಉದ್ಘಾಟನಾ ಸಭಾ ಕಾರ್ಯಕ್ರಮಕ್ಕೆಂದು ಸಿದ್ಧತೆ ಮಾಡಿಕೊಂಡಿದ್ದ ಇಲಾಖಾಧಿಕಾರಿಗಳು ಸಭಾ ಕಾರ್ಯಕ್ರಮ ನಡೆಸಲಾಗದೆ ನಿರಾಸೆಗೆ ಒಳಗಾದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ: ಈ ಘಟನೆಯಿಂದ ತೀವ್ರ ವಿಚಲಿತರಾದ ಪುತ್ತೂರು ಶಾಸಕ ಅಶೋಕ್‌ ರೈ. ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕನಾದ ನನಗೂ ಮಾಹಿತಿ ನೀಡದೆ, ಮಾಧ್ಯಮಕ್ಕೂ ಮಾಹಿತಿ ನೀಡದೆ ಸುಸಜ್ಜಿತ ಕಟ್ಟಡವನ್ನು ಗುಟ್ಟಾಗಿ ಲೋಕಾರ್ಪಣೆ ಮಾಡುವ ಅಗತ್ಯತೆ ಏನಿದೆ. ನೂತನ ಕಟ್ಟಡವನ್ನು ಮುಂದಿನ ೧೫ ದಿನಗಳ ಒಳಗಾಗಿ ವ್ಯವಸ್ಥಿತವಾದ ರೀತಿಯಲ್ಲಿ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು. ಸಚಿವರು ಆಗಮಿಸುತ್ತಿದ್ದಾರೆಂದು ಕೊನೆ ಕ್ಷಣದಲ್ಲಿ ಮಾಹಿತಿ ಪಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಸಚಿವರು ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದಾಗ ಎಲ್ಲರ ಮುಖದಲ್ಲಿ ನಿರಾಸೆಯ ಭಾವ ಮೂಡಿತ್ತು. ಒಂದು ಭವ್ಯ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಕೆಲವು ನಿಮಿಷಗಳಾದರೂ ಮಾತನಾಡಲು ಸಮಯವಿಲ್ಲದ ಮೇಲೆ ಉದ್ಘಾಟನೆಗೆ ಬರುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಕಾಂಗ್ರೆಸ್‌ ನಾಯಕರಾದ ರಕ್ಷಿತ್ ಶಿವರಾಮ್, ಮುರಳೀಧರ ರೈ, ಡಾ. ರಾಜಾರಾಮ ಕೆ.ಬಿ., ಇಸುಬು ಪೆದಮಲೆ, ಅಯೂಬ್, ಯು.ಟಿ. ತೌಷಿಫ್ , ಜಯವಿಕ್ರಂ ಮೊದಲಾದವರು ಉಪಸ್ಥಿತರಿದ್ದರು.