ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ಬಿಪಿಎಲ್ ಕಾರ್ಡ್ ನೀಡಿಲ್ಲ. ಅಂಗವಿಕಲರಾದ ನಮಗೆ 4ನೇ ಮಹಡಿಯಲ್ಲಿ ಮನೆ ಕೊಟ್ಟಿದ್ದಾರೆ, ಸತ್ತವರ ಹೆಸರಲ್ಲಿ ಖಾತೆಗೆ ಅರ್ಜಿ ಸಲ್ಲಿಸಿದ್ದಾರೆ, ಸ್ತ್ರೀ ಶಕ್ತಿ ಸಂಘಕ್ಕೆ ಅನುದಾನ ಕೊಡಿ ಎಂಬಿತ್ಯಾದಿ ಸಮಸ್ಯೆಯನ್ನು ಹೊತ್ತು ಬಂದ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಅವರಿಗೆ ದೂರು ಸಲ್ಲಿಸಿದರು.
ಏಕಲವ್ಯನಗರದ ಅಂಧ ನಿವಾಸಿ ಜವರಶೆಟ್ಟಿ ಅವರ ಪುತ್ರ ಶಿವಶೆಟ್ಟಿ ಎಂಬವರು ಸಚಿವರಿಗೆ ಮನವಿ ಸಲ್ಲಿಸುತ್ತ. ಮನೆಯಲ್ಲಿ ನಾನು, ನನ್ನ ಪತ್ನಿ ಇಬ್ಬರೂ ಅಂಧರು. ಮಕ್ಕಳೂ ಕೂಡ ಅಂಗವಿಕಲರು. ನಮಗೆ ಏಕಲವ್ಯನಗರದ ವಸತಿ ಸಮುಚ್ಛಯದ ನಾಲ್ಕನೇ ಮಹಡಿಯಲ್ಲಿ ಮನೆ ನೀಡಿದ್ದಾರೆ. ಕೆಳಗಿನ ಮನೆಯವರು ನೀರನ್ನು ಪಂಪ್ ಮಾಡಿಕೊಂಡು ಬಳಸಿಕೊಂಡು ಬಿಟ್ಟರೆ ನಮಗೆ ನೀರೆ ಸಿಗುವುದಿಲ್ಲ. ನಮಗೆ ತುಂಬಾ ತೊಂದರೆ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರು ನೀಡಿ ಗೋಳಾಡಿದರು.ಈ ಬಗ್ಗೆ ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿದ ಮಹದೇವಪ್ಪ ಅವರು, ಏನು ಇವರ ಸಮಸ್ಯೆ ಎಂದು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಅಧಿಕಾರಿಗಳು ಇವರಿಗೆ ಮನೆ ನೀಡಿಲ್ಲ. ಆದರೂ ಬಂದು ವಾಸವಿದ್ದಾರೆ ಎಂದರು.
ಆಗ ಸಚಿವ ಮಹದೇವಪ್ಪ ಅವರು, ನೀವು ಏನೋ ಹೆದರಿಸಿ, ಬೆದರಿಸಿ ಸೇರಿಕೊಂಡಿದ್ದೀರಾ? ನಾವು ಸ್ವಲ್ಪ ಹೆದರಿಸಿ, ಕೆಳಗೆ ಇರುವವರನ್ನು ಮೇಲೆ ಕಳುಹಿಸಿ ನಿಮಗೆ ಏನೋ ದಾರಿ ಮಾಡೋಣ ಬಿಡಿ ಎಂದರು.ಮರಿದೇವಯ್ಯ ಎಂಬವರು ಅರ್ಜಿ ಸಲ್ಲಿಸಿ, ನಾಗವಾಲದಲ್ಲಿ ದಲಿತರ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಡಲು ಉದ್ದೇಶಿಸಲಾಗಿದೆ. 2019ರಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಹೆಸರಿನಲ್ಲಿ 2024ರಲ್ಲಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅರ್ಜಿ ಸಲ್ಲಿಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಎಚ್.ಡಿ. ಕೋಟೆಯ ವ್ಯಕ್ತಿಯೊಬ್ಬರು ದೂರು ನೀಡಿ, ನೆರೆ ಸಂತ್ರಸ್ಥರಾದ ನಮಗೆ ಪುನರ್ವಸತಿ ಯೋಜನೆಯಡಿ ಬಾಕಿ ಹಣ ಬರಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗಿದೆ. ಆದಷ್ಟು ಬೇಗ ಉಳಿಕೆ ಹಣ ಕೊಡಿಸುವಂತೆ ಕೋರಿದರು. ಈ ಬಗ್ಗೆ ಪರಿಶೀಲಿಸಿ ಬಾಕಿ ಹಣ ಕೊಡಿಸುವುದಾಗಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.ಮಂಟೇಲಿಂಗಯ್ಯ ಎಂಬವರು ದೂರು ನೀಡಿ, ಕೆಸರೆಯಲ್ಲಿನ ಕುರಿಮಂಡಿಯನ್ನು ರಿಂಗ್ ರಸ್ತೆಗೆ ಸ್ಥಳಾಂತರಿಸುವಂತೆ ಕೋರಿದರು. ಲಲಿತಾದ್ರಿಪುರದ ನಿವಾಸಿಗಳು ನಗರದ ಕಸವನ್ನು ತಂದು ನಮ್ಮ ಬಡಾವಣೆಯಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.
ಕೃಷ್ಣ ಎಂಬವರು ತಮಗೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿ 2 ವರ್ಷವಾದರೂ ನೀಡಿಲ್ಲ ಎಂದು ಅವಲತ್ತುಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅ.1 ರಿಂದ ಪೋರ್ಟಲ್ ಆರಂಭವಾಗಲಿದೆ. ಆಗ ಅರ್ಜಿ ಸಲ್ಲಿಸಿ ಎಂದರು.ಮತ್ತೋರ್ವ ಮಹಿಳೆ ನಾವು ಕೂಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ಬಿಪಿಎಲ್ ಕಾರ್ಡನ್ನು ಎಪಿಎಲ್ ಆಗಿ ಬದಲಿಸಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಿಕ ಕುಮುದಾ ಅವರಿಗೆ ಸಚಿವರು ಸೂಚಿಸಿದರು.
ಎಲೆ ತೋಟದವರಿಗೆ 245 ಮಂದಿಗೆ ನಿವೇಶನ ಕೊಡಬೇಕು. ಆದರೆ, 85 ನಿವೇಶನಕ್ಕೆ ಮಾತ್ರ ದಾಖಲಾತಿ ಲಭಿಸಿದೆ. ಕೂಡಲೇ ನಮಗೆ ಹಕ್ಕು ಪತ್ರ ವಿತರಿಸುವಂತೆ ದೇವರಾಜ್ ಟಿ. ಕಾಟೂರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳೇ ಬಂದು ಹಕ್ಕಪತ್ರ ವಿತರಿಸುವುದಾಗಿ ಹೇಳಿದರು. ಅಲ್ಲದೆ ವಾಲ್ಮೀಕಿ ಪ್ರತಿಮೆ ನಿರ್ಮಿಸಿಕೊಡಬೇಕು. ಅದು ವಾಲ್ಮೀಕಿ ಜಯಂತಿ ಒಳಗೆ ಆಗಬೇಕು ಎಂದು ಆಗ್ರಹಿಸಿದರು. ಅಂಬೇಡ್ಕರ್, ದೇವರಾಜ ಅರಸು ಮತ್ತು ವಾಲ್ಮೀಕಿ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸುವುದಾಗಿ ಅವರು ಭರವಸೆ ನೀಡಿದರು.ಮೈಸೂರು ಜಿಲ್ಲೆಯಲ್ಲಿ 8 ಸಾವಿರ ಮಂದಿ ಪ.ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಮಗೆ ಮೂರು ಹಾಸ್ಟೆಲ್ಮಾತ್ರ ಇದೆ. 10 ಹಾಸ್ಟೆಲ್ ಬೇಕು ಎಂದರು.
ಕಾಂಗ್ರೆಸ್ ಮುಖಂಡ ಬಸವಣ್ಣ ಮಾತನಾಡಿ, ಮಹಾತ್ಮಗಾಂಧಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಅಂತೆಯೇ ಸಯ್ಯಾಜಿರಾವ್ ರಸ್ತೆ ಡಾಂಬರೀಕರಣ ಮಾಡಬೇಕಾಗಿ ಕೋರಿದರು. ಇದರಿಂದ ಕೋಪಗೊಂಡ ಸಚಿವರು, ನೀನೇ ನಿಂತು ರಸ್ತೆ ರಿಪೇರಿ ಮಾಡಿಸು ಎಂದು ಹೇಳಿದರು.ದಡದಹಳ್ಳಿ ಬಳಿ ಪೆಟ್ರೋಲ್ ಬಂಕ್ ತೆರೆಯಲು ಅನುಮತಿ ದೊರೆತು 9 ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ದೊರೆತಿದ್ದರೂ ಎಂಡಿಎಯಿಂದ ಭೂ ಪರಿವರ್ತನೆ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ದೂರು ನೀಡಿದರು.
ಈ ವೇಳೆ ಎಂಡಿಎ ಅಧಿಕಾರಿಯು ಜಾಗ ಕಡಿಮೆ ಇರುವುದಾಗಿ ಮಾಹಿತಿ ನೀಡಿದರು. ಆಗ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಎನ್ಒಸಿ ನೀಡಿದ ಮೇಲೆ ನೀವು ವಿಳಂಬ ಮಾಡೋದು ಯಾಕೆ? ಮೊದಲು ಕ್ಲಿಯರ್ ಮಾಡಿ ಎಂದು ತರಾಟೆಗೆ ತಗೆದುಕೊಂಡರು.ಎಂ.ಸಿ. ಹುಂಡಿಯ ರಾಜೇಶ್ ಎಂಬವರು ಗ್ರಾಮದ ಸ್ಮಶಾನಕ್ಕೆ ಭೂಮಿ ಕೊಡಬೇಕು. ರೈತರಿಗೆ ಅನುಕೂಲವಾಗಲು ರಾಗಿ ಒಕ್ಕಣೆ ಕಣಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.
ಕುಪ್ಪೆ ಗ್ರಾಮದ ಮಹಿಳೆಯೊಬ್ಬರು ಗ್ರಾಮದಲ್ಲಿ ಚರಂಡಿ ಹೂಳು ತುಂಬಿದೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಡೆಂಘಿ ಬರುತ್ತಿದೆ. ಕೂಡಲೇ ಹೂಳು ತೆಗೆಸಬೇಕು. ಸ್ವಚ್ಛತೆಗೆ ಗಮನಹರಿಸಲು ಪಂಚಾಯಿತಿಗೆ ಸೂಚಿಸುವಂತೆ ಕೋರಿದರು.ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಎಂಡಿಎ ಅಧ್ಯಕ್ಷ ಕೆ. ಮರೀಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಸಿಎಫ್ ಡಾ.ಕೆ.ಎನ್. ಬಸವರಾಜ, ಎಸ್ಪಿ ಎನ್. ವಿಷ್ಣುವರ್ಧನ್ ಮೊದಲಾದವರು ಇದ್ದರು.