ಸಾರಾಂಶ
ಈಗ ಚೈನ್ ಕಟ್ ಆಗಿ ಕಳಚಿ ಬಿದ್ದಿರುವ 19ನೇ ಗೇಟ್ ಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಮಾಡಲಾಗುತ್ತಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ.19ಕ್ಕೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಚೈನ್ ಕಟ್ ಆಗಿ ಕಳಚಿ ಬಿದ್ದಿರುವ 19ನೇ ಗೇಟ್ ಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಗೇಟ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಪರಿಣಿತ ಕನ್ನಯ್ಯ ನಾಯ್ಡು ತಿಳಿಸಿದ್ದಾರೆ. ಹಾಗಾಗಿ ಈ ಗೇಟ್ ನಿರ್ಮಾಣ ಕಾರ್ಯ ಯಶಸ್ವಿ ಆಗಲಿದೆ ಎಂಬ ಆಶಾಭಾವ ಹೊಂದಿದ್ದೇವೆ. ರೈತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈಗ ತಾತ್ಕಾಲಿಕವಾಗಿ ಗೇಟ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಜಲಾಶಯದಿಂದ ಈಗ ನದಿಗೆ ನೀರು ಬಿಡಲಾಗುತ್ತಿದೆ. ಈ ಹಂತದಲ್ಲೇ ನಾವು ಗೇಟ್ ನಿರ್ಮಾಣ ಮಾಡುವ ಸಾಹಸಕ್ಕೆ ಕೈಹಾಕಿದ್ದೇವೆ. ತಂತ್ರಜ್ಞರು, ಕಾರ್ಮಿಕರು ಕೂಡ ಉತ್ಸಾಹದಿಂದ ಕೆಲಸ ಮಾಡಲು ಸನ್ನದ್ಧರಾಗಿದ್ದಾರೆ. ಈಗ ನಾವು ಪೂಜೆ ಕೂಡ ಮಾಡಿದ್ದೇವೆ. ಈ ಗೇಟ್ ಅಳವಡಿಕೆಯಿಂದ ನಮಗೆ ಭಾರೀ ಪ್ರಮಾಣದಲ್ಲಿ ನೀರು ಉಳಿಯಲಿದೆ. ಇಲ್ಲದಿದ್ದರೆ 60 ಟಿಎಂಸಿಯಷ್ಟು ನೀರು ಕಳೆದುಕೊಳ್ಳುತ್ತೇವೆ. ಹಾಗಾಗಿ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಮಾಡುತ್ತಿದ್ದೆವೆ ಎಂದರು.
ಪರಿಣಿತ ತಜ್ಞ ಕನ್ನಯ್ಯ ನಾಯ್ಡು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು ಇದ್ದರು.ಹೊಸಪೇಟೆಯ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂಬರ್ 19ಕ್ಕೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣಕ್ಕಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ವಿಶೇಷ ಪೂಜೆ ನೆರವೇರಿಸಿದರು.