ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರು, ಇದೇ ಮೊದಲ ಬಾರಿಗೆ ಸೋಮವಾರ ಬಾಗಲಕೋಟೆಗೆ ಆಗಮಿಸಿ, ಬೃಹತ್ ರೋಡ್ ಶೋ ಮೂಲಕ ಕೈ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಮಾಡಿದರು.ಈ ವೇಳೆ ಮಾತನಾಡಿ, ‘ಕೈ’ ಅಭ್ಯರ್ಥಿ ಮೇಟಿ ಪರ ಪ್ರಚಾರಕ್ಕಾಗಿ ಬಾಗಲಕೋಟೆಗೆ ಬಂದಿದ್ದೇನೆ. ಈಗಾಗಲೇ ದಾವಣಗೆರೆಯಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಇಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಚಾರ ಮಾಡಿದ್ದೇನೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿದ್ದೇನೆ. ಇನ್ನೂ ಪ್ರಚಾರದ ಅಗತ್ಯ ಬಿದ್ದರೆ ಮತ್ತೆ ದಾವಣಗೆರೆಗೆ ಹೋಗುತ್ತೇನೆ. ಮಲ್ಲಿಕಾರ್ಜುನ ಅವರು ಹೇಳಿದರೆ ಮಂಗಳವಾರ ಮತ್ತೆ ಹೋಗಿ ದಾವಣಗೆರೆಯಲ್ಲಿ ಅರ್ಧ ದಿನ ಪ್ರಚಾರ ಮಾಡುತ್ತೇನೆ’ ಎಂದರು.
‘ಸಿದ್ದರಾಮಯ್ಯನವರ ವರ್ಚಸ್ಸು, ಸರ್ಕಾರದ ಕಾರ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿವೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ನಾನು ಸಿದ್ದರಾಮಯ್ಯ ಅವರೊಂದಿಗೆ ಪ್ರಚಾರ ಮಾಡುತ್ತಿದ್ದೇನೆ. ಹುಬ್ಬಳ್ಳಿಯಲ್ಲಿ ದಾರಿಯುದ್ದಕ್ಕೂ ಅವರಿಗಾಗಿ ಜನ ಕಾಯುತ್ತಿದ್ದರು. ಯಾರಾದರೂ ಅವರಿಗೆ ಇಷ್ಟ ಆದಾಗ ಮಾತ್ರ ಈ ರೀತಿ ಜನ ಸೇರ್ತಾರೆ. ಅಂತಹ ವರ್ಚಸ್ಸನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತಿ ಹೆಚ್ಚು ಅನುದಾನವನ್ನು ಬಾಗಲಕೋಟೆಗೆ ತರಲಾಗಿದೆ. ಈ ಬಾರಿ ಇಲ್ಲಿ ನಮ್ಮ ಅಭ್ಯರ್ಥಿ 35,000 ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.