ಸಾರಾಂಶ
ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ 75ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು, ಮಧುಗಿರಿ ಕ್ಷೇತ್ರದ ಕಾರ್ಯರ್ತರೆಲ್ಲಾ ಸೇರಿ ಸಡಗರ ಸಂಭ್ರಮದಿಂದ ಆಚರಿಸಿದರು. ನಗರದ ಕ್ಯಾತ್ಸಂದ್ರದಲ್ಲಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಚಿವ ರಾಜಣ್ಣನವರಿಗೆ ಪುಷ್ಪಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯದ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ 75ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು, ಮಧುಗಿರಿ ಕ್ಷೇತ್ರದ ಕಾರ್ಯರ್ತರೆಲ್ಲಾ ಸೇರಿ ಸಡಗರ ಸಂಭ್ರಮದಿಂದ ಆಚರಿಸಿದರು. ನಗರದ ಕ್ಯಾತ್ಸಂದ್ರದಲ್ಲಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಚಿವ ರಾಜಣ್ಣನವರಿಗೆ ಪುಷ್ಪಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.ಬೆಳಿಗ್ಗೆಯಿಂದಲೇ ಮಧುಗಿರಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರು, ಅಭಿಮಾನಿಗಳು ಸಚಿವರ ಭೇಟಿ ನೀಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಶುಭ ಕೋರಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ನಂಜೇಗೌಡ, ನಾಗೇಶ್‌ಬಾಬು, ಚಂದ್ರಶೇಖರರೆಡ್ಡಿ ಹಾಗೂ ಮಾಜಿ ನಿರ್ದೇಶಕ ಎಂ.ಪಿ. ಕಾಂತರಾಜು ಅವರು ಕೆ.ಎನ್. ರಾಜಣ್ಣನವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಹಸು-ಕರುವನ್ನು ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ನಾನು ಸಹಕಾರ ಕ್ಷೇತ್ರದ ಮೂಲಕ ರಾಜಕಾರಣಕ್ಕೆ ಬಂದವನು. ಅಂದಿನಿಂದಲೂ ಜನ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ಗೆಲ್ಲಿಸುತ್ತಾ ಬಂದಿದ್ದಾರೆ. ನಾನು ಸಹ ಅವರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು. ರಾಜಕಾರಣದಲ್ಲಿ ನಮಗೆ ಅಧಿಕಾರ ದೊರೆತ ಮೇಲೆ ಬಡವರು, ದೀನ ದಲಿತರು, ಶೋಷಿತರ ವರ್ಗದವರು ಸೇರಿದಂತೆ ಎಲ್ಲ ವರ್ಗಗಳಲ್ಲಿ ಇರುವ ಬಡವರ ಏಳ್ಗೆಗೆ ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಖನಾಗಿದ್ದೇನೆ ಎಂದರು. ಅಧಿಕಾರ ಇದ್ದಾಗ ಬಡವರ ಕಷ್ಟ-ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಆಗ ಮಾತ್ರ ರಾಜಕಾರಣಿಗಳು ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.