ಕೆ.ಎನ್.ರಾಜಣ್ಣ ಮಸಲತ್ತಿನ ಆಟ ನಡೆಯುವುದಿಲ್ಲ: ಬಿಜೆಪಿ ಮುಖಂಡ ಜಿವಿಟಿ ಬಸವರಾಜು

| Published : Apr 03 2024, 01:30 AM IST

ಕೆ.ಎನ್.ರಾಜಣ್ಣ ಮಸಲತ್ತಿನ ಆಟ ನಡೆಯುವುದಿಲ್ಲ: ಬಿಜೆಪಿ ಮುಖಂಡ ಜಿವಿಟಿ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸೋಲಿನ ಭೀತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಕೆಲ ಕಾಂಗ್ರೆಸ್‌ ಮುಖಂಡರು ಅನ್ಯ ಪಕ್ಷಗಳ ಮುಖಂಡರ ಮನೆ ಬಾಗಿಲು ಬಡಿಯುತ್ತಿರುವ ಮಸಲತ್ತಿನ ಆಟ ನಡೆಯುವುದಿಲ್ಲ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಟೀಕಿಸಿದರು. ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಿ ಮೋದಿ ಸಾಮರ್ಥ್ಯ ಜಗತ್ತಿಗೆ ಗೊತ್ತು

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸೋಲಿನ ಭೀತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಕೆಲ ಕಾಂಗ್ರೆಸ್‌ ಮುಖಂಡರು ಅನ್ಯ ಪಕ್ಷಗಳ ಮುಖಂಡರ ಮನೆ ಬಾಗಿಲು ಬಡಿಯುತ್ತಿರುವ ಮಸಲತ್ತಿನ ಆಟ ನಡೆಯುವುದಿಲ್ಲ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸಾಮರ್ಥ್ಯ ಏನೆಂಬುದು ಜಗತ್ತಿಗೆ ಪರಿಚಿತವಾಗಿದೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೈತ್ರಿಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತಾಗಿದ್ದು ಸ್ವಾರ್ಥ ಸಾಧನೆಗೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಸಮರ್ಥ ಅಭ್ಯರ್ಥಿ ದೊರೆಯದ ಹಿನ್ನೆಲೆ ಅನ್ಯ ಪಕ್ಷಗಳ ಮುಖಂಡರ ಮನೆಗಳಿಗೆ ತೆರಳಿ ಅಂಗಲಾಚುತ್ತಿರುವುದು ದೂರದೃಷ್ಟಕರ ಎಂದು ಕುಹಕವಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಒಬ್ಬ ಪ್ರಬುದ್ಧ ರಾಜಕಾರಣಿ ಎಂದು ಸಚಿವ ಕೆ.ಎನ್.ರಾಜಣ್ಣ ಹೊಗಳಿಕೆ ಮಾತನಾಡುತ್ತಿರುವುದು ಹಿನ್ನಡೆ ಹೊಂದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯೊಂದಿಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದ್ದು ಕೆ.ಎನ್.ರಾಜಣ್ಣ ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ವ್ಯಕ್ತಿ ಇದೀಗ ತಮ್ಮ ಮುಖ ಉಳಿಸಿಕೊಳ್ಳಲು ಪ್ರೀತಂಗೌಡ ಪ್ರಬುದ್ಧ ರಾಜಕಾರಣಿ ಎಂದು ಮಸಲತ್ತಿನ ಹೇಳಿಕೆ ನೀಡುವ ಮೂಲಕ ಕೆಲ ಬಿಜೆಪಿ ಮುಖಂಡರ ಮನೆ ಬಾಗಿಲು ತಟ್ಟುತ್ತಿರುವುದು ಫಲ ನೀಡುವುದಿಲ್ಲ ಎಂದು ಲೇವಡಿ ಮಾಡಿದರು.

ಜಿವಿಟಿ ಬಸವರಾಜು.