ಪೌರ ಕಾರ್ಮಿಕರೊಂದಿಗೆ ಸಚಿವ ಕೃಷ್ಣ ಭೈರೇಗೌಡ ಅವರು ಇತ್ತೀಚೆಗೆ ನಡೆದುಕೊಂಡ ರೀತಿ ಖಂಡನೀಯವಾಗಿದ್ದು, ಅವರು ತಕ್ಷಣವೇ ಪೌರ ಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು ಎಂದು ಎಐಸಿಸಿಟಿಯು ರಾಜ್ಯ ಘಟಕದ ಸಹಕಾರ್ಯದರ್ಶಿ ನಾಗರಾಜ ಪೂಜಾರ್ ಆಗ್ರಹಿಸಿದ್ದಾರೆ.

ಸಿಂಧನೂರು: ಪೌರ ಕಾರ್ಮಿಕರೊಂದಿಗೆ ಸಚಿವ ಕೃಷ್ಣ ಭೈರೇಗೌಡ ಅವರು ಇತ್ತೀಚೆಗೆ ನಡೆದುಕೊಂಡ ರೀತಿ ಖಂಡನೀಯವಾಗಿದ್ದು, ಅವರು ತಕ್ಷಣವೇ ಪೌರ ಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು ಎಂದು ಎಐಸಿಸಿಟಿಯು ರಾಜ್ಯ ಘಟಕದ ಸಹಕಾರ್ಯದರ್ಶಿ ನಾಗರಾಜ ಪೂಜಾರ್ ಆಗ್ರಹಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು, ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಜೀವನಕ್ಕಾಗಿ ಪ್ರತಿದಿನ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ಅವಮಾನಿಸುವ ಮನೋಭಾವವನ್ನು ಯಾವುದೇ ಕಾರಣಕ್ಕೂ ಒಪ್ಪಿ ಕೊಳ್ಳಲು ಸಾಧ್ಯವಿಲ್ಲ. ಅವರ ಪರಿಶ್ರಮವಿಲ್ಲದೆ ನಗರವನ್ನು ಸ್ವಚ್ಛವಾಗಿ ಹಾಗೂ ಆರೋಗ್ಯಕರವಾಗಿ ನಿರ್ವಹಿಸು ವುದು ಸಾಧ್ಯವಿಲ್ಲ. ಇಂತಹ ಕಾರ್ಮಿಕರೊಂದಿಗೆ ಕನಿಷ್ಠ ಗೌರವ ಮತ್ತು ಮಾನವೀಯತೆಯಿಂದ ಮಾತನಾಡುವ ಬದಲು ಅಧಿಕಾರದ ದರ್ಪದಿಂದ ವರ್ತಿಸುವುದು ಅತ್ಯಂತ ಆಕ್ಷೇಪಾರ್ಹ ಎಂದು ದೂರಿದ್ದಾರೆ.

ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ದುಡಿಯುತ್ತಿದ್ದಾರೆ. ಅವರು ಈಗಾಗಲೇ ಸಾಮಾಜಿಕ ಕೀಳರಿಮೆ, ತಾರತಮ್ಯ ಮತ್ತು ಅವಮಾನ ಕಾರಿ ವರ್ತನೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರದಲ್ಲಿರುವವರು ಇನ್ನಷ್ಟು ಜವಾಬ್ದಾರಿ ಯಿಂದ ಮತ್ತು ಮಾನವೀಯತೆಯಿಂದ ನಡೆದುಕೊಳ್ಳಬೇಕು. ಪೌರಕಾರ್ಮಿಕರಿಗೆ ವಾರದ ರಜೆ, ಕಾನೂನುಬದ್ಧ ರಜೆಗಳು, ಸಮಯಕ್ಕೆ ಸರಿಯಾಗಿ ವೇತನ, ಅಗತ್ಯ ಸುರಕ್ಷತಾ ಉಪಕರಣಗಳು, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಒತ್ತಾಯಿಸಿದರು.