ಮಲಪ್ರಭಾ ನದಿ ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣಭೈರೇಗೌಡ

| Published : Jul 02 2025, 12:23 AM IST

ಮಲಪ್ರಭಾ ನದಿ ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣಭೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೋಮವಾರ ಸಂಜೆ ತಾಲೂಕಿನ ಕುಸಮಳಿ ಗ್ರಾಮದ ಬಳಿ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿರುವ ಮಲಪ್ರಭಾ ನದಿಯನ್ನು ವೀಕ್ಷಿಸಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು. ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಸೇತುವೆ ಕಾಮಗಾರಿಯ ಪ್ರಗತಿ ಮತ್ತು ನದಿಯ ಪ್ರವಾಹ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಮಹಮ್ಮದ್‌ ರೋಷನ್ ಮತ್ತು ಎಸ್ಪಿ ಡಾ.ಭೀಮಾಶಂಕರ ಗುಳೇದ ಸೇರಿದಂತೆ ತಾಲೂಕಿನ ಅಧಿಕಾರಿಗಳು ಈ ಸೇತುವೆ ಮೂಲಕ ವಾಹನ ಸಂಚಾರ ಸ್ಥಗಿತವಾದ ಕಾರಣ ಬೆಳಗಾವಿ-ಗೋವಾ ನಡುವೆ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದರು. ನಂತರ ಸಚಿವರು ಆದಷ್ಟು ಬೇಗ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರ ಆರಂಭಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಸಚಿವರು ತಾಲೂಕಿನಲ್ಲಿ ಸದ್ಯದ ಮಳೆಯ ವಿವರ ಮತ್ತು ಮಲಪ್ರಭಾ ನದಿಯ ಪ್ರವಾಹ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಸಚಿವರಿಗೆ ಮನವಿ ಸಲ್ಲಿಸಿದ ಸ್ಥಳೀಯ ನಾಗರಿಕರು ಮನವಿಗಳ ಮೂಲಕ ಮಲಪ್ರಭಾ ನದಿಯ ಸೇತುವೆ ಕಾಮಗಾರಿ ವಿಳಂಬವಾಗಿರುವ ಕಾರಣ ಜಾಂಬೋಟಿ-ಬೆಳಗಾವಿ ಮಾರ್ಗದಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದ್ದು, ಈ ಭಾಗದಲ್ಲಿ ವ್ಯಾಪಾರ-ವಹಿವಾಟಿಗೆ ಉಂಟಾಗಿರುವ ತೊಂದರೆ ಬಗ್ಗೆ ಸಚಿವರ ಗಮನ ಸೆಳೆದರು. ತಾಲೂಕಿನ ಕೌಲಾಪುರವಾಡಾ ಬಳಿ ಕಾರ್ಯನಿರ್ವಹಿಸುತ್ತಿರುವ ಪೌಲ್ಟ್ರಿ ಫಾರ್ಮ್ ಒಂದರಿಂದ ಅಲ್ಲಿಯ ಜನರು ಅನುಭವಿಸುತ್ತಿರುವ ಸಂಕಷ್ಟಗಳು, ಬೆಳಗಾವಿ-ಧಾರವಾಡ ರೈಲು ಮಾರ್ಗಕ್ಕಾಗಿ ಬಲವಂತವಾಗಿ ಕೃಷಿ ಭೂಮಿ ವಶಕ್ಕೆ ಪಡೆದಿರುವುದು, ಗಾಯರಾಣ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವುದು, ಗರ್ಲಗುಂಜಿ ಗ್ರಾಮದಲ್ಲಿ ನೆಮ್ಮದಿ ಕೇಂದ್ರ ಆರಂಭಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ತಾಲೂಕಿನ ವಿವಿಧ ಗ್ರಾಮಗಳ ನಾಗರಿಕರು ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೆ ಮನವಿ ಪ್ರತಿ ನೀಡಿ ಈ ಸಮಸ್ಯೆಗಳ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸಿಕೊಡುವಂತೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಚಿವರನ್ನು ಸತ್ಕರಿಸಲಾಯಿತು. ಮಹಾಂತೇಶ ರಾಹೂತ, ಈಶ್ವರ ಘಾಡಿ, ಮಹಾದೇವ ಕೋಳಿ, ಸುರೇಶ ಜಾಧವ, ಸಾವಿತ್ರಿ ಮಾದರ, ಪ್ರಸಾದ ಪಾಟೀಲ್, ಭೈರು ಪಾಟೀಲ, ವಿಲಾಸ ಬೆಳಗಾಂವಕರ, ಸಂತೋಷ ಹಂಜಿ, ದೇಮಣ್ಣ ಬಸರಿಕಟ್ಟಿ, ವಿವೇಕ ತಡಕೋಡ, ಗುಡ್ಡೂ ತೇಕಡಿ ಸೇರಿದಂತೆ ಅಧಿಕಾರಿಗಳು, ಸ್ಥಳೀಯರು ಇದ್ದರು.