ಚನ್ನಪಟ್ಟಣದಲ್ಲಿ ಕಚೇರಿ ಅವ್ಯವಸ್ಥೆಗೆ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ

| Published : Aug 10 2024, 01:37 AM IST

ಚನ್ನಪಟ್ಟಣದಲ್ಲಿ ಕಚೇರಿ ಅವ್ಯವಸ್ಥೆಗೆ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣದ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಪರಿಶೀಲಿಸಿದ ವೇಳೆ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಎಸಿ ಮತ್ತು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

-ಚನ್ನಪಟ್ಟಣ ತಾಲೂಕು ಕಚೇರಿಗೆ ಕಂದಾಯ ಸಚಿವರ ಭೇಟಿ -ಕಚೇರಿಯ ವಿವಿಧ ಶಾಖೆ, ಕಡತಗಳ ಪರಿಶೀಲಿಸಿದ ಕೃಷ್ಣಭೈರೇಗೌಡ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಚನ್ನಪಟ್ಟಣದ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಪರಿಶೀಲಿಸಿದ ವೇಳೆ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಎಸಿ ಮತ್ತು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಬೆಳಗ್ಗೆ ೧೦.೩೦ಕ್ಕೆ ಆಗಮಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡರು ಕಚೇರಿಯಲ್ಲಿನ ಕಡತಗಳು, ಹಾಜರಿ ಪುಸ್ತಕಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಟಪಾಲು ಕೊಠಡಿ ಪರಿಶೀಲನೆ: ಮೊದಲಿಗೆ ತಾಲೂಕು ಕಚೇರಿಯಲ್ಲಿನ ಟಪಾಲು ಕೊಠಿಡಿ ಪರಿಶೀಲನೆ ನಡೆಸಿದ ಸಚಿವರು, ಜನರಿಂದ ಸ್ವೀಕೃತವಾಗಿರುವ ಅರ್ಜಿಗಳ ಮಾಹಿತಿ ಕೇಳಿದರು. ಪ್ರತಿನಿತ್ಯ ಎಷ್ಟು ಅರ್ಜಿಗಳು ಪಡೆಯುತ್ತೀರಿ? ಯಾವ ರೀತಿ ವಿಲೇವಾರಿ ಮಾಡುತ್ತಾರೆಂಬ ಮಾಹಿತಿ ಪಡೆದರು. ಈ ವೇಳೆ ರಿಜಿಸ್ಟ್ರಾರ್ ಪುಸ್ತಕ ಪರಿಶೀಲಿಸಿ, ಹಿಂದಿನ ಪುಸ್ತಕಗಳನ್ನು ತೋರಿಸುವಂತೆ ಸೂಚಿಸಿದರು.

ಈ ವೇಳೆ ಸಿಬ್ಬಂದಿ ರಿಜಿಸ್ಟರ್‌ಗಾಗಿ ತಡಕಾಡಿದರಾದರೂ, ಎಷ್ಟು ಹೊತ್ತಾದರೂ ರಿಜಿಸ್ಟರ್ ಸಿಗಲಿಲ್ಲ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಈ ಹುಡುಕುವ ನಾಟಕ ಬಿಟ್ಟು, ಇನ್ನು ಮುಂದಾದವರೂ ರಿಜಿಸ್ಟರ್ ಒಂದು ಕಡೆ ಜೋಡಿಸಿಡಿ ಎಂದು ತಾಕೀತು ಮಾಡಿದರು.

ಇ-ಆಫೀಸ್ ಪರಿಶೀಲನೆ: ಕಂಪ್ಯೂಟರ್ ಕೊಠಡಿ ಪರಿಶೀಲಿಸಿ, ಇ-ಆಫೀಸ್ ತಂತ್ರಾಂಶದ ಮಾಹಿತಿ ಪಡೆದುಕೊಂಡು. ಪ್ರತಿನಿತ್ಯ ಎಷ್ಟು ಅರ್ಜಿಗಳನ್ನು ಇ-ಆಫೀಸ್ ತಂತ್ರಾಂಶದಲ್ಲಿ ಎಷ್ಟು ಅರ್ಜಿಗಳನ್ನು ಅಪ್‌ಲೋಡ್ ಮಾಡಲಾಗುತಿದೆ ಎಂಬ ಮಾಹಿತಿ ಪಡೆದುಕೊಂಡರು. ಟಪಾಲಿನ ಅರ್ಜಿಗಳಿಗೂ ಇಲ್ಲಿ ನೀಡುತ್ತಿರುವ ಮಾಹಿತಿಗೂ ತಾಳೆಯಾಗುತ್ತಿಲ್ಲ. ಸರಿಪಡಿಸುವಂತೆ ಸೂಚಿಸಿದರು.

ಶಿರಸ್ತೇದಾರ್ ಶಾಖೆಗೆ ತೆರಳಿದ ಸಚಿವರು, ಅಲ್ಲಿ ಯಾವ ಸಿಬ್ಬಂದಿ ಯಾವ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ವಿವರ ಪಡೆದು ಹಾಜರಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ಹಾಜರಿ ಪುಸ್ತಕದಲ್ಲಿ ಕೆಲ ಅಧಿಕಾರಿಗಳ ಸಹಿ ಇಲ್ಲದ್ದನ್ನು ಕಂಡು ಪ್ರಶ್ನಿಸಿದರು. ಸಮಯ ೧೦.೪೫ ಆದರೂ ಕಚೇರಿಗೆ ಇನ್ನು ಕೆಲ ಅಧಿಕಾರಿಗಳು ಹಾಜರಿಯಾಗದ ಕುರಿತು ತಹಸೀಲ್ದಾರ್ ನರಸಿಂಹಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಚಿವರು, ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡಲು ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ಇದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ನಿಮಗೆ ಒಂದೇ ಕೆಲಸನ್ನು ಎರಡೆರಡು ಬಾರಿ ಮಾಡಲು ಸರ್ಕಾರ ಸಂಬಳ ನೀಡುತ್ತದೆಯೇ ಎಂದು ಕಿಡಿಕಾರಿದರು.

ನಾನು ಬೆಂಗಳೂರಿನಿಂದ ಹೊರಟು ಚನ್ನಪಟ್ಟಣಕ್ಕೆ ಬರುವಷ್ಟರಲ್ಲಿ ಕಾರಿನಲ್ಲಿ ಕುಳಿತು ೪೯ ಕಡತಗಳನ್ನು ವಿಲೇವಾರಿ ಮಾಡಿದ್ದೇನೆ. ನಿಮಗೇಕೆ ಆಗಲ್ಲ. ಸಿಬ್ಬಂದಿಗೆ ಇ-ಆಫೀಸ್ ಬಳಕೆ ತರಬೇತಿ ನೀಡಿಲ್ಲವೇ ಎಂದು ತಹಸೀಲ್ದಾರ್‌ರನ್ನು ಪ್ರಶ್ನಿಸಿದರು. ಭೂಮಾಪನ ಶಾಖೆಯಲ್ಲಿ ಪರಿಶೀಲಿಸಿದ ಸಚಿವರು, ಸರ್ವೇ ಕಾರ್ಯಗಳ ವಿಳಂಬವೇಕೆ? ಎಷ್ಟು ಸರ್ವೇಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಪ್ರಶ್ನಿಸಿದರು. ೪ ಮಂದಿ ಸರ್ವೇಯರ್‌ಗಳು ಇದ್ದಾರೆಂದು ಅಧಿಕಾರಿಗಳು ತಿಳಿಸಿದರು.

ಕಚೇರಿಯೇ ಕಸದ ತೊಟ್ಟಿ?: ತಾಲೂಕು ಕಚೇರಿ ಒಳಗೆ ಹಳೇ ವಸ್ತಗಳು ಶೇಖರಿಸಿದ್ದು ಹಾಗೂ ಕಸ ಕಂಡು ಹೌಹಾರಿದ ಸಚಿವರು, ಇದು ಕಚೇರಿಯೇ, ಇಲ್ಲ ಕಸದ ತೊಟ್ಟಿಯೇ ಎಂದು ಕಿಡಿಕಾರಿದರು. ಮಹಡಿಯಲ್ಲಿದ್ದರೂ ಶೌಚಾಲಯದ ವಾಸನೆ ಇಲ್ಲಿಗೆ ಬರುತ್ತಿದೆ. ಕಚೇರಿಯನ್ನು ಈ ರೀತಿ ಇಟ್ಟುಕೊಳ್ಳುವುದೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು ಕಡತಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಭ್ರಷ್ಟಾಚಾರದ ಕುರಿತು ಸಚಿವರ ಗಮನಸೆಳೆದರು. ವರ್ಷಗಳಿಂದ ಓಡಾಡುತ್ತಿದ್ದರೂ ಸರ್ವೇ ಮಾಡಿಕೊಡುತ್ತಿಲ್ಲ ಎಂದು ವೃದ್ಧರೊಬ್ಬರು ತಮ್ಮ ಅಳಲು ತೋಡಿಕೊಂಡರು.

ಜನರನ್ನು ಕಚೇರಿಗೆ ಅಲೆದಾಡಿಸಬೇಡಿ, ಅವರ ಕೆಲಸಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಲು ಆದ್ಯತೆ ನೀಡಿ, ಎಸಿ ಕಚೇರಿಗೆ ಬರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಆದ್ಯತೆ ನೀಡಿ ಎಂದು ಎಸಿ ಹಾಗೂ ತಹಸೀಲ್ದಾರರಿಗೆ ಸಲಹೆ ನೀಡಿದರು.

ತಾಲೂಕು ಕಚೇರಿಯಲ್ಲಿ ಪಾರದರ್ಶಕತೆ ಇಲ್ಲ

ಚನ್ನಪಟ್ಟಣ: ಇಲ್ಲಿನ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಜನಪರ ಹಾಗೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದನ್ನು ಹೇಳಲು ಬೇಸರವಾಗುತ್ತದೆ. ಆದರೆ, ಇದೇ ಸತ್ಯ. ಅಧಿಕಾರಿಗಳು ಸರ್ಕಾರಿ ಕೆಲಸ ಎಂದರೆ ಜನರ ಕೆಲಸ ಎಂದು ಅರಿಯಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಅಧಿಕಾರಿಗಳಿಗೆ ಯಾವುದೇ ಜನಪರ ಕಾಳಜಿ ಇಲ್ಲ. ಕೆಲವು ಅಧಿಕಾರಿಗಳಲ್ಲಿ ನಾವು ಇರುವುದು ಜನರಿಗಾಗಿ ಎಂಬ ಭಾವನೆಯೇ ಇಲ್ಲ, ಜನರಿರುವುದೇ ನಮಗಾಗಿ ಎಂಬ ಭ್ರಮೆಯಲ್ಲಿದ್ದಾರೆ. ಇಲಾಖೆ ಸಚಿವನಾಗಿ ಇದನ್ನು ಹೇಳಲು ನನಗೆ ಬೇಸರವಾಗುತ್ತಿದೆ ಎಂದರು.

ಜೂ.೧೫ಕ್ಕೆ ಟಪಾಲಿಗೆ ಸಲ್ಲಿಸಿದ ಅರ್ಜಿ ಇಂದಿನವರೆಗೆ ಟಪಾಲು ಶಾಖೆಯಿಂದ ಒಂದೇ ಒಂದು ಟೇಬಲ್‌ಗೂ ಮುಂದಕ್ಕೆ ಹೋಗಿಲ್ಲ. ಎರಡುವರೆ ತಿಂಗಳಾದರೂ ಅರ್ಜಿಗಳು ಮುಂದಕ್ಕೆ ಹೋಗಿಲ್ಲ. ಸತ್ಯ ಮಾತನಾಡುವುದು ಕಷ್ಟ. ಆದರೆ, ಸತ್ಯ ಹೇಳದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ. ಈ ಕುರಿತು ಒಬ್ಬಬ್ಬರನ್ನು ಬೈದು ಪ್ರಯೋಜನವಿಲ್ಲ. ಇಡೀ ವ್ಯವಸ್ಥೆಯಲ್ಲಿಯೇ ಬದಲಾವಣೆ ತರಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಬೇಕಿದೆ. ಎಲ್ಲಾ ಶಾಖೆಗೂ ಕಂಪ್ಯೂಟರ್ ನೀಡಲಾಗಿದೆ. ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಆದರೂ, ಇನ್ನು ಕಾಗದಲ್ಲೇ ವ್ಯವಹಾರ ಮಾಡುತ್ತಿದ್ದು, ಆನಂತರ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ ಎಂದರು.