ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬದುಕಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಅರಣ್ಯರೋಧನೆ ಅನುಭವಿಸುತ್ತಿದ್ದ ಹಿರಿಯ ವಯಸ್ಸಿನ ತಾಯಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನ ಮಿಡಿದಿದ್ದು, ವೈಯಕ್ತಿಯವಾಗಿ ಧನ ಸಹಾಯ ಮಾಡಿದ್ದಾರೆ.ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದರು. ಈತನ ತಾಯಿ ನೀಲವ್ವ ಗುರಕ್ಕನವರ ಮಗನನ್ನು ಕಳೆದುಕೊಂಡು, ಮಗನ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗದೇ ಅಸಹಾಯಕಳಾಗಿದ್ದಳು. ನಂತರ ಮಾಜಿ ಮೇಯರ್ ವಿಜಯ ಮೋರೆ ಅವರ ಪುತ್ರ ಅಲೆನ್ ಮತ್ತು ಅವರ ಗೆಳೆಯರ ನೆರವಿನಿಂದ ಮಗನ ಅಂತ್ಯಸಂಸ್ಕಾರ ನೇರೆವೇರಿಸಿದ್ದರು. ಅಂತ್ಯಸಂಸ್ಕಾರ ವೇಳೆ ಗೃಹಲಕ್ಷ್ಮೀ ಯೋಜನೆಯಿಂದ ಪಡೆಯುತ್ತಿರುವ ಮಾಸಿಕ ₹2000 ಹಣದ ಕುರಿತು ಪ್ರಸ್ತಾಪಿಸಿ ಆಕ್ರಂದನ ವ್ಯಕ್ತಪಡಿಸಿದ್ದರು.
ಅಂತ್ಯಸಂಸ್ಕಾರ ಸಮಯದಲ್ಲಿ ಮಗನನ್ನು ಕಳೆದುಕೊಂಡ ತಾಯಿ ಅರಣ್ಯ ರೋಧನದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಅಂತ್ಯಸಂಸ್ಕಾರ ಮುಗಿಸಿ ಸ್ವ ಗ್ರಾಮ ಮರಕುಂಬಿಗೆ ಹೋಗಿದ್ದ ತಾಯಿಯ ನೆರವಿಗೆ ಧಾವಿಸಿ ಆರ್ಥಿಕ ಸಹಾಯ ಮಾಡಿದ್ದಾರೆ.ಒಂದು ವರ್ಷಕ್ಕೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಜಮಾ ಆಗುವ ಒಟ್ಟು ₹ 24 ಸಾವಿರ ಹಣದ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಕಚೇರಿಯ ವಿಶೇಷ ಅಧಿಕಾರಿ ಜೆ.ಬಿ.ಬಾಗೋಜಿಕೊಪ್ಪ ಅವರ ಮೂಲಕ ಹಣ ಮಹಿಳೆಯ ಮನೆಗೆ ಕಳುಹಿಸಿದ್ದಾರೆ. ಅಲ್ಲದೇ ನೊಂದ ತಾಯಿಯೊಂದಿಗೆ ಕರೆ ಮೂಲಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಸಾಂತ್ವಾನದ ಜತೆಗೆ ಆತ್ಮಸ್ಥೈರ್ಯವನ್ನು ತುಂಬಿದರು. ಸದಾಕಾಲವೂ ತಾಯಿಯ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ತಾಯಿ ಹೃದಯಕ್ಕೆ ನೊಂದ ಹಿರಿಯ ಜೀವ ಹರಿಸಿ ಹಾರೈಯಿಸಿದೆ. ಸಚಿವೆಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.