ವಚನ ಎಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮಾನವೀಯತೆಯ ದೃಷ್ಟಿಕೋನ.
ಕನ್ನಡಪ್ರಭ ವಾರ್ತೆ ಮೈಸೂರುವಚನ ಎಂದರೆ ಕೇವಲ ಸಾಹಿತ್ಯವಲ್ಲ ಅದು ಬದುಕಿನ ಸತ್ಯ, ಸಮಾನತೆಯ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಘೋಷಣೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಶ್ರೀ ಜಗದ್ಗುರು ವೀರ ಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಹಾಗೂ ಬಸವ ಬಳಗಗಳ ಒಕ್ಕೂಟ 2026 ಅವರ ಸಂಯುಕ್ತಾಶ್ರಯದಲ್ಲಿ ವಲಯ ಮಟ್ಟದ ವಚನ ಸಂಗೀತ ಉತ್ಸವ’ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಚನ ಎಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮಾನವೀಯತೆಯ ದೃಷ್ಟಿಕೋನ. 12ನೇ ಶತಮಾನದಲ್ಲಿ ಜಾತಿ, ಲಿಂಗಭೇದಗಳನ್ನು ಮೀರಿ ಎಲ್ಲರಿಗೂ ಸಮಾನತೆಯ ಸಂದೇಶ ನೀಡಿದ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.ಬಸವಣ್ಣನವರ ಅನುಭವ ಮಂಟಪವು ಕೇವಲ ಒಂದು ಸಭೆಯಾಗಿರಲಿಲ್ಲ ಅದು ವಿಚಾರ, ಸ್ವಾತಂತ್ರ್ಯ, ಸಂವಾದ ಹಾಗೂ ಸಾಮಾಜಿಕ ನ್ಯಾಯದ ಅಪೂರ್ವ ವೇದಿಕೆಯಾಗಿತ್ತು ಎಂದು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳು ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಮೌಲ್ಯಗಳನ್ನು ಪರಿಚಯಿಸಿದ ಅಪೂರ್ವ ಸಾಹಿತ್ಯ ಎಂದು ಹೇಳಿದರು.12ನೇ ಶತಮಾನದಲ್ಲೇ ಬಸವಾದಿ ಶರಣರು ಸಾಮಾನ್ಯ ಜನರಿಗೂ ಧ್ವನಿ ನೀಡಿ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯ ಅಡಿಪಾಯ ಹಾಕಿದ್ದರು. ವಚನಗಳು ಕೇವಲ ಗದ್ಯ ಅಥವಾ ಪದ್ಯ ರೂಪದಲ್ಲಷ್ಟೇ ಅಲ್ಲದೆ ಗಾಯನದ ಶಕ್ತಿ ಸಹ ಹೊಂದಿವೆ. ರಾಗ, ತಾಳ ಮತ್ತು ಭಾವಗಳಿಗೆ ಸುಲಭವಾಗಿ ಅಳವಡಿಸಬಹುದಾದ ಅಪಾರ ಶಕ್ತಿ ವಚನ ಸಾಹಿತ್ಯಕ್ಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ ವಚನ ಸಾಹಿತ್ಯಕ್ಕೂ ಹಾಗೂ ಸುತ್ತೂರು ಶ್ರೀಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ವಲಯ ಮಟ್ಟದ ವಚನ ಸಂಗೀತ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ರಾಮಚಂದ್ರ, ಮೈಸೂರು ಪೇಂಟ್ಸ್ ಅಂಡ್ ವಾರ್ನಿಶ್ ಲಿಮಿಟೆಡ್ ಅಧ್ಯಕ್ಷರು ಎಚ್.ಡಿ. ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಎಂ. ವಸುಂಧರ, ಎಡಿಸಿ ಆರ್. ಐಶ್ವರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.