ಸಾರಾಂಶ
-ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಭರವಸೆ
-----ಕನ್ನಡಪ್ರಭ ವಾರ್ತೆ ಆನವಟ್ಟಿ
ಸೊರಬ, ಆನವಟ್ಟಿ. ಶಿರಾಳಕೊಪ್ಪ ಸೇರಿದಂತೆ 354 ಹಳ್ಳಿಗೆ ಶರಾವತಿಯಿಂದ ಮನೆ-ಮನೆಗೆ ಕುಡಿವ ನೀರು ಪೂರೈಸುವ ಯೋಜನೆಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಪ್ರಾರಂಭಿಸಲಾಗುವುದು. ಇನ್ನೂ ಮುಂದೆ ಈ ಭಾಗದಲ್ಲಿ ಕುಡಿವ ನೀರಿಗಾಗಿ ಕೊಳವೆ ಬಾವಿ ಕೊರೆಸುವುದು ಬೇಡ. ಕುಡಿವ ನೀರಿಗಾಗಿ ಶಾಶ್ವತ ಪರಿಹಾರ ದೊರಕುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಭರವಸೆ ನೀಡಿದರು.ಸೋಮವಾರ ಕುಬಟೂರು ಗ್ರಾಮದಲ್ಲಿ ಕರಿಯಮ್ಮ ದೇವಸ್ಥಾನದ ಮುಂಭಾಗ 25ಲಕ್ಷ ಅನುದಾನದ ಸಮುದಾಯ ಭವನ ಭೂಮಿ ಪೂಜೆ ಹಾಗೂ ಹಕ್ಕು ಪತ್ರ ವಿತರಿಸಿದದ್ದಕ್ಕಾಗಿ, ಮಾವಿನ ಕೊಪ್ಪಲು ಕೇರಿಯ ಜನತೆಯಿಂದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಕಟ್ಟುವ ಗೂಡುಗಳು ಚಿಕ್ಕದಾಗಿರಲಿ, ಶಾಲೆಗಳನ್ನು ದೊಡ್ಡದಾಗಿ ಕಟ್ಟಿ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಮತ್ತು ದೇವರು ಸಹ ಇಂತಹ ಸೇವಾ ಕಾರ್ಯ ಮೆಚ್ಚಿ ಆಶೀರ್ವಾದ ಮಾಡುತ್ತಾನೆ ಎಂದರು.ತಂದೆ ಕಲಿತ ಶಾಲೆಗೆ 10ಲಕ್ಷ ದೇಣಿಗೆ ನೀಡಿದ್ದೇನೆ. ನನ್ನ ಮಕ್ಕಳ ಸಮಾನವಾಗಿ, ರಾಜ್ಯದ ಜನರ ಮಕ್ಕಳು ಶಿಕ್ಷಣ ಪಡೆಯಬೇಕು. ಹಾಗಾಗಿ, ಶಿಕ್ಷಣ ಇಲಾಖೆಯಲ್ಲಿ ಹಂತ-ಹಂತ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ. ನನ್ನ ಶಾಲೆ, ನನ್ನ ಜವಾಬ್ದಾರಿ ಯೋಜನೆಗೆ ದಾನಿಗಳು ಸಹಕಾರ ನೀಡುವ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ಧಿ ಕೈಜೋಡಿಸಿ ಎಂದರು.
ದೇಶದಲ್ಲೇ ಶಿವಮೊಗ್ಗ ಜಿಲ್ಲೆ. ಸೊರಬ ತಾ., ಕುಬಟೂರು ಗ್ರಾಮ ಎಂದರೆ ಸಾಕು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಊರಿನವರೇ ಎಂದು ತಕ್ಷಣ ಗುರುತಿಸಿ, ಗೌರವ ನೀಡುತ್ತಾರೆ. ನಾನು ಎರಡು ಸಲ ಮಾತ್ರ ಗೆದ್ದಿರುವುದು, ಸಾಕಷ್ಟು ಬಾರಿ ನನಗೆ ಸೋಲಾಗಿದೆ. ಆದರೆ, ತಂದೆ ಬಂಗಾರಪ್ಪ ಅವರನ್ನು ಸತತ ಗೆಲ್ಲಿಸಿ, ಅವರನ್ನು ಮುಖ್ಯಮಂತ್ರಿ ಮಾಡಿರುವ ಸೊರಬ ಕೇತ್ರದ ಜನರ ಮೇಲೆ ನನಗೆ ಅಪಾರ ಗೌರವಿದೆ. ಹಾಗಾಗಿ, ನಾನು ಸೋತರು, ಗೆದ್ದರು ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ ಎಂದರು.ಕುಬಟೂರಿನ ಮಾವಿನ ಕೊಪ್ಪಲಿನ 5 ಜನರಿಗೆ ಹಕ್ಕುಪತ್ರ ಸಿಗಬೇಕಾಗಿದ್ದು, ಅವರಿಗೆ 94ಡಿ ಅರ್ಜಿ ಪಡೆದು, ಅವರಿಗೂ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
ಐದು ಕೋಟಿ ಅನುದಾನದಲ್ಲಿ ಜಡೆ ಕುಬಟೂರು ರಸ್ತೆ ಅಗಲೀಕರಣಗೊಳ್ಳಲಿದೆ ಎಂದರು.ಚಲುವ ಕೇರಿಯ ಕುಡಿವ ನೀರಿನ ಅಭಾವ ಹೇಳಿಕೊಂಡ ಕೂಡಲೆ, ಸಚಿವರು ತಡಮಾಡದೆ ಕೊಳವೆ ಬಾವಿ ಕೊರೆಯಿಸಿ, ಕುಡಿವ ನೀರಿನ ಕೊರತೆ ನಿಗಿಸಿದರು. ಕುಬಟೂರು ಗ್ರಾಮಕ್ಕೂ ಅಭಿವೃಧಿ ಕಾಮಗಾರಿ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದಲ್ಲೇ ಒಳ್ಳೇಯ ಹೆಸರನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಡೆದುಕೊಂಡಿದ್ದಾರೆ ಎಂದು ಗ್ರಾಮದ ಮುಖಂಡರಾದ ಪಿ.ಎಸ್ ಮಂಜುನಾಥ, ಷಣ್ಮುಖ ಪೂಜಾರ್, ಗುಡ್ಡಪ್ಪ ಮಾಸ್ತರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮುಖಂಡರಾದ ಎಂ.ಡಿ ಶೇಖರ್, ನಿಂಗಪ್ಪ ಮಾಸ್ತರ್, ಮಂಜಣ್ಣ ನೇರಲಗಿ, ಮಧುಕೇಶ್ವರ್ ಪಾಟೀಲ್, ರವೀಂದ್ರ ರಾಯರು, ಬಸವರಾಜ್, ಸುರೇಶ್ ಹಾವಣ್ಣನವರ್, ಸುಮತೇಂದ್ರ ರಾವ್, ಶ್ರೀಕಾಂತ್, ಜಿ.ಕೆ ಕೊಟೇಶ್, ರಾಘವೇಂದ್ರ, ಗಿರಿ ಪೂಜಾರ್, ಸುರೇಶ್, ಕೆ. ಪಿ ಅಶೋಕ್, ವೀರಪ್ಪ ಜಡೆ ಇದ್ದರು.--
ಫೋಟೊ: ಆನವಟ್ಟಿ ಕುಬಟೂರು ಗ್ರಾಮದ ಕರಿಯಮ್ಮ ದೇವಸ್ಥಾನದ ಮುಂಬಾಗ 25ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಸಚಿವ ಎಸ್. ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.31ಎಎನ್‌ಟಿ1ಇಪಿ