ಸಿಬಿಐ, ಐಟಿ, ಇಡಿ ನನಗೂ ಕೊಟ್ರೆ ನಾನೂ ಚಾಣಕ್ಯ ಆಗ್ತಿನಿ: ಖರ್ಗೆ

| Published : Apr 04 2024, 01:08 AM IST / Updated: Apr 04 2024, 10:36 AM IST

ಸಾರಾಂಶ

ಕರ್ನಾಟಕ ರಾಜ್ಯದಿಂದ ಬರ ಪರಿಹಾರಕ್ಕೆ ಬೇಡಿಕೆ ಸರಿಯಾದ ಸಮಯಕ್ಕೆ ಬಂದಿಲ್ಲ, ಮೂರು ತಿಂಗಳು ವಿಳಂಬವಾಗಿ ಬಂದಿದೆ ಅದಕ್ಕೆ ಏನು ಮಾಡೋದಕ್ಕೆ ಆಗ್ತಿಲ್ಲ ಅಂತ ಅಮಿತ್ ಶಾ ಸಾವಿರಾರು ಜನರ ಮುಂದೆ ಅವರು ಸುಳ್ಳು ಹೇಳಿದ್ದಾರೆ - ಪ್ರಿಯಾಂಕ್ ಖರ್ಗೆ ಆಕ್ರೋಶ

  ಕಲಬುರಗಿ‌ :  ಬರ ಪರಿಹಾರ ಕೋರಿಕೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದೆ, ಅದಕ್ಕೇ ನೆರವು ದೊರೆತಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರ ಪರಿಹಾರ ನೆರವು ಕೋರಿ ರಾಜ್ಯ ಕೇಂದ್ರಕ್ಕೆ ವಿಳಂಬ ಪ್ರಸ್ತಾವನೆ ಸಲ್ಲಿಸಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅಮಿತ ಷಾ ಸುಳ್ಳಿನ ಸರದಾರ, ಮಿನಿಸ್ಟರ್ ಆಫ್ ಮಿಸ್ ಇನ್ಪಾರಮೆಶನ್ ಎಂದು ಲೇವಡಿ ಮಾಡಿದರು.

ಕರ್ನಾಟಕ ರಾಜ್ಯದಿಂದ ಬರ ಪರಿಹಾರಕ್ಕೆ ಬೇಡಿಕೆ ಸರಿಯಾದ ಸಮಯಕ್ಕೆ ಬಂದಿಲ್ಲ, ಮೂರು ತಿಂಗಳು ವಿಳಂಬವಾಗಿ ಬಂದಿದೆ ಅದಕ್ಕೆ ಏನು ಮಾಡೋದಕ್ಕೆ ಆಗ್ತಿಲ್ಲ ಅಂತ ಅಮಿತ್ ಶಾ ಸಾವಿರಾರು ಜನರ ಮುಂದೆ ಅವರು ಸುಳ್ಳು ಹೇಳಿದ್ದಾರೆ. ಅವರಿಗೆ ಈ ರೀತಿ ಸುಳ್ಳು ಹೇಳಲು ನಾಚಿಕೆ ಬರಬೇಕು, ಯಾರು ಬರ ಪರಿಹಾರ ಕೊಡಬೇಕೋ ಆ ವ್ಯಕ್ತಿ ಸರಕಾರದ ವಿರುದ್ಧ ಸುಳ್ಳು ಹೇಳೋದು ಅ‍ವರಿಗೆ ಶೋಭೆ ತಾರದು ಎಂದರು.

ರಾಜ್ಯದ 236 ತಾಲೂಕಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಹಾಗೂ 223 ತಾಲೂಕುಗಳ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿ ಕೇಂದ್ರಕ್ಕೆ ಸೆ.22, 2023 ಎಂದು ವರದಿ‌ ಸಲ್ಲಿಸಿತ್ತು. ನಂತರ 10 ಸದಸ್ಯರ ಕೇಂದ್ರದ‌ ತಂಡ ಅ.05 ಹಾಗೂ 9ರಂದು ಬರಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿ ಬರ ಅಧ್ಯಯನ ನಡೆಸಿತ್ತು. ಆ ನಂತರ, ರಾಜ್ಯದ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಹೆಚ್ಚುವರಿ ಮನವಿಯನ್ನು ಅ.9 ರಂದು ಕೇಂದ್ರಕ್ಕೆ ಸಲ್ಲಿಸಿ, ಒಟ್ಟು 48 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ₹18171.44 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಲಾಗಿತ್ತು ಎಂದರು.

ಬರ ಮ್ಯಾನುವೆಲ್ ನಿಯಮಾವಳಿ ಪ್ರಕಾರ ಮುಂಗಾರು ಹಂಗಾಮಿನಲ್ಲಿನ ಬರದ ವರದಿಯನ್ನು ಅ.31 ಹಾಗೂ ಹಿಂಗಾರಿನ ಬರದ ವರದಿಯನ್ನು ಮಾ.31ರ ಒಳಗಾಗಿ ಸಲ್ಲಿಸಬೇಕು. ರಾಜ್ಯ ಸರ್ಕಾದ ಮುಂಗಾರಿನ ಬರದ ವರದಿಯನ್ನು ಸೆ.22 ಕ್ಕೆ‌ ಹಾಗೂ ಹೆಚ್ಚುವರಿ ಮನವಿಯನ್ನು ಅ.9 ಕ್ಕೆ ಸಲ್ಲಿಸಿದ್ದು ನಿಯಮಾವಳಿ ನಿಗದಿಪಡಿಸಿದ ದಿನಾಂಕದ ಒಳಗೆ ಸಲ್ಲಿಸಲಾಗಿದೆ. ಆದರೂ ಕೂಡಾ ಕೇಂದ್ರ ಗೃಹ ಸಚಿವರು ಮನವಿ ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.

ಸರ್ವಾಧಿಕಾರಿ ಹಿಟ್ಲರ್‌ ಬಳಿ ಪ್ರೊಪೆಗಂಡಾ ಆಂಡ್ ಪಬ್ಲಿಕ್‌ ಎನ್‌ಲೈಟನ್‌ಮೆಂಟ್‌ ಅನ್ನೋ ಖಾತೆ ಇತ್ತಂತೆ, ಅದಕ್ಕೆ ಮಂತ್ರಿಯಾಗಿ ಗೋಬೆಲ್ಸ್ ಇದ್ದರಂತೆ. ಪದೇ ಪದೇ ಸುಳ್ಳು ಹೇಳೋದು, ಅದನ್ನೇ ಸತ್ಯವೆಂದು ಸಾಬೀತು ಮಾಡೋದೇ ಈ ಖಾತೆಯ ಮಂತ್ರಿ ಕೆಲಸವಾಗಿತ್ತು, ಗೋಬೆಲ್ಸ್‌ ನಂತರ ಇನ್ಯಾರಾದ್ರೂ ಸುಳ್ಳು ಹೇಳ್ತಾರೆ ಅಂದ್ರೆ ಅದು ಅಮಿತ್ ಶಾ ಎಂದು ಖರ್ಗೆ ತಿವಿದರು.

ಮನವಿ ಸಲ್ಲಿಸಿದ ನಂತರವೇ ಕೇಂದ್ರ ತಂಡ ಬಂದುಹೋಗಿದ್ದು: ಬರ ಪರಿಹಾರ ಮನವಿ ಸಲ್ಲಿಸುವಲ್ಲಿ ರಾಜ್ಯ ಸರಕಾರ ವಿಳಂಬ ಮಾಡಿಲ್ಲ. ನಾವು ಸಲ್ಲಿಸಿದ ಮನವಿ ನಂತರವೇ ಕೇಂದ್ರ ಬರ ಅಧ್ಯಯನ ತಂಡ ಬಂದು ಪರಿಶೀಲನೆ ಮಾಡಿದ್ದಾರೆಂದು ಅ.31 ರೊಳಗೆ ಕೋರಿಕೆ ಸಲ್ಲಿಕೆಯಾಗಿದೆ, ಬರಗಾಲ ಮಾರ್ಗಸೂಚಿಯಂತೆಯೇ ರಾಜ್ಯ ಸರಕಾರ ಕೆಲಸ ಮಾಡಿದೆ ಎಂದು ದಾಖಲೆಗಳನ್ನು ನೀಡಿದರು.

ಕೋರಿಕೆ ಸಲ್ಲಿಸಿ ನಾವು ಕುಳಿತಿಲ್ಲ, ಸಿಎಂ ಅವರು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದಾರೆ. ರಾಜ್ಯದ ಕ್ಯಾಬಿನೆಟ್ ಸಬ್ ಕಮಿಟಿ ಮೂವರು ಸಚಿವರು ಕೇಂದ್ರ ಹಣಕಾಸು ಸಚಿವರನ್ನು, ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಎಲ್ಲಾ ಸಂಸದರು, ಶಾಸಕರು ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಿವಿ. ಇಷ್ಟೆಲ್ಲಾ ಆದ್ರೂ ಯಾಕೆ ಸುಳ್ಳು ಹೇಳ್ತಿರಿ ಅಮಿತ್ ಶಾ ಅವರೇ? ನಿಮಗೆ ಪುತ್ರ ಜಯ್‌ ಷಾ ಆಯೋಜಿಸಿರುವ ಕ್ರಿಕೆಟ್ ನೋಡಲು ಹೋಗೋಕೆ ಟೈಮ್ ಸಿಗುತ್ತೆ, ಆದ್ರೆ ಬರಕ್ಕೆ ಸಂಬಂಧಿಸಿದಂತೆ ಹೈ ಲೆವೆಲ್ ಕಮಿಟಿ ಮೀಟಿಂಗ್ ಮಾಡೋದಕ್ಕೆ ಯಾಕೆ ಟೈಮಿಲ್ಲಾ ಎಂದು ಖರ್ಗೆ ಪ್ರಶ್ನಿಸಿದರು.

ಯಡಿಯೂರಪ್ಪ, ವಿಜಯೇಂದ್ರರನ್ನು ಅಕ್ಕ ಪಕ್ಕದಲ್ಲಿ ಕೂಡಿಸಿಕೊಂಡು ಪರಿವಾರ ಮತ್ತು ಭ್ರಷ್ಟಾಚಾರದ ಬಗ್ಗೆ ಅಮಿತ್ ಶಾ ಮಾತಾಡ್ತಾರೆಂದು ವ್ಯಂಗ್ಯವಾಡಿದ ಖರ್ಗೆ, ಅಮಿತ್ ಶಾ ಚುನಾವಣಾ ಚಾಕಣ್ಯ ಅಲ್ಲವೇ ಅಲ್ಲ. ಐಟಿ, ಇಡಿ, ಸಿಬಿಐಗಳೇ ಅವರ ಪಾಲಿನ ಚುನಾವಣಾ ಚಾಣಕ್ಯ, ಸಿಬಿಐ, ಐಟಿ, ಇಡಿ ನನಗೂ ಕೊಡಿ ನಾನೂ ಚಾಣಕ್ಯ ಆಗ್ತಿನಿ. ಶಾ ಅವರ ರಣತಂತ್ರದಿಂದಲೇ ನಮಗೆ 136 ಸೀಟು ಬಂದಿದೆ ನೆನಪಿರಲಿ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಚಿಂಚೋಳಿ ಸಂಸದ ಸೇರಿ ರಾಜ್ಯದ ಯಾವೊಬ್ಬ ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ ವಸ್ತುಸ್ಥಿತಿಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಪ್ರವೀಣ್ ಹರವಾಳ, ಡಾ ಕಿರಣ್ ದೇಶಮುಖ್ ಸೇರಿದಂತೆ ಹಲವರಿದ್ದರು.