ರಬಕವಿ-ಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಶನಿವಾರ ಭೇಟಿ ನೀಡಿ ಉಪವಾಸ ನಿರತರ ಮನವೊಲಿಸಿ ಸತ್ಯಾಗ್ರಹ ಅಂತ್ಯಗೊಳಿಸಿದರು.

ಕನ್ನಡ ಪ್ರಭವಾರ್ತೆ,ರಬಕವಿ-ಬನಹಟ್ಟಿ

ಮಹಿಷವಾಡಗಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ರಬಕವಿಯ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಶನಿವಾರ ಭೇಟಿ ನೀಡಿ ಉಪವಾಸ ನಿರತರ ಮನವೊಲಿಸಿ ಸತ್ಯಾಗ್ರಹ ಅಂತ್ಯಗೊಳಿಸಿದರು.ಮಹಿಷವಾಡಗಿ ಸೇತುವೆ ಕಾಮಗಾರಿ ಬಗ್ಗೆ ಜಟಿಲ ಸಮಸ್ಯೆಗಳ ಕುರಿತಾಗಿ ಮಾಹಿತಿಯಿರಲಿಲ್ಲ. ವಿಳಂಬಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಸೇತುವೆ ಕಾಮಗಾರಿ ಸಂಪೂರ್ಣಗೊಳಿಸಲು ನನ್ನ ಸಹಮತವಿದೆ. ನಿಯಮ ಹಾಗೂ ಅವಧಿ ಹಾಕದೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಎಂದು ಸಚಿವ ತಿಮ್ಮಾಪೂರ ನೀಡಿದ ಭರವಸೆಗೆ ಹೋರಾಟಗಾರರು ಸಹಮತ ತೋರಿದರು.

ಮಹಿಷವಾಡಗಿ ಸೇತುವೆ ಕಾಮಗಾರಿಗೆ ಸಂಬಂಧ ೭ ಮುಖ್ಯ ಕಾರ್ಯ ಹಾಗೂ ಬೇಡಿಕೆಗಳಿದ್ದು, ಅವೆಲ್ಲವನ್ನೂ ಸರಳೀಕರಣಗೊಳಿಸಿ ಸುತ್ತಲಿನ ಮದನಮಟ್ಟಿ ಹಾಗೂ ಮಹಿಷವಾಡಗಿ ರೈತರಿಗೂ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಕಲ ರೀತಿಯ ಪರಿಹಾರದೊಂದಿಗೆ ಮುಕ್ತವಾಗಿ ಕಾಮಗಾರಿಯೊಂದಿಗೆ ಸೇತುವೆ ಕಾಮಗಾರಿ ನಾಳೆಯಿಂದಲೇ ಆರಂಭವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಕಾಮಗಾರಿ ಕುರಿತಾಗಿ ಸಂಪೂರ್ಣ ಮಾಹಿತಿ ಒದಗಿಸಿದ್ದಲ್ಲದೆ, ಉಪವಾಸ ಸತ್ಯಾಗ್ರಹದ ಬಗ್ಗೆಯೂ ಮನವರಿಕೆ ಮಾಡಲಾಗಿದೆ. ಅವರ ಅನುಪಸ್ಥಿತಿಯಲ್ಲಿಯೂ ಸಂಪೂರ್ಣ ಜವಾಬ್ದಾರಿಯೊಂದಿಗೆ ರಬಕವಿ-ಬನಹಟ್ಟಿ ಹಾಗೂ ಅಥಣಿಗೆ ಸಂಪರ್ಕದ ಕೊಂಡಿಯಾಗಿರುವ ಈ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವುದಾಗಿ ಸಚಿವರು ತಿಳಿಸಿದರು.

ಸತ್ಯಾಗ್ರಹಿಗಳಿಗೆ ಧನ್ಯವಾದ ಹೇಳಿದ ಸಚಿವರು: ಉಪವಾಸ ಸತ್ಯಾಗ್ರಹದಲ್ಲಿ ಡಾ. ರವಿ ಜಮಖಂಡಿ ನೇತೃತ್ವದಲ್ಲಿ ೬ ಜನರು ಕುಳಿತಿದ್ದೀರಿ. ನೀವೆಲ್ಲ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಿದ್ದಕ್ಕೆ ಸಚಿವ ತಿಮ್ಮಾಪೂರ ಧನ್ಯವಾದ ತಿಳಿಸಿದರು. ಹೋರಾಟಗಳು ಅನಿವಾರ್ಯ ನಾನೂ ಸಹಿತ ಹೋರಾಟಗಳಿಂದಲೇ ಜನರ ಧ್ವನಿಯಾಗಿ ಬಂದವನು ಎಂದು ಮಾರ್ಮಿಕವಾಗಿ ಸತ್ಯಾಗ್ರಹಿಗಳ ಬೆನ್ನು ತಟ್ಟಿದರು.

ಅಮ್ಮಾ-ಅಣ್ಣಾ ಏನ್ ಮಾಡಿದ್ರೀ..?: ಕಳೆದ ೧೦ ವರ್ಷಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ. ಎಷ್ಟು ಅವಧಿಯೊಳಗೆ ಮುಕ್ತಾಯಗೊಳಿಸುತ್ತೀರಿ? ಎಂದು ಸತ್ಯಾಗ್ರಹಿಗಳು ಸಚಿವರನ್ನು ಪ್ರಶ್ನಿಸಿದಾಗ, ಸಚಿವ ಆರ್.ಬಿ. ತಿಮ್ಮಾಪೂರ ಸತ್ಯಾಗ್ರಹ ಸ್ಥಳದಲ್ಲಿ ಮಾತನಾಡಿ, ಉಮಾಶ್ರೀ `ಅಮ್ಮಾ’ ಹಾಗೂ ಸಿದ್ದು ಸವದಿ `ಅಣ್ಣಾ’ ಇಬ್ಬರೂ ಐದೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಕೆಲಸ ಮಾಡಿದ್ರಾ?. ಈಗಲೂ ಅವಧಿ ಹಾಕಬೇಡಿ, ನನ್ನನ್ನು ನಂಬಿ ಸರಾಗವಾಗಿ ಸಮಸ್ಯೆಯಿಲ್ಲದೆ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ಎಂದಾಗ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಅಥಣಿ ಹಾಗೂ ತೇರದಾಳದ ಸವದಿದ್ವಯರು ಶಾಸಕರಿದ್ದು, ಅವರ ಸಮ್ಮುಖದಲ್ಲಿಯೇ ಕೆಲಸ ಮಾಡುವದಾಗಿ ತಿಮ್ಮಾಪೂರ ತಿಳಿಸಿದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಸೇತುವೆ ಕಾಮಗಾರಿಗೆ ಸಂಬಂಧಿತ ಸಂಪರ್ಕ, ಭೂ ಸ್ವಾಧೀನ ಹಾಗೂ ಕಾಮಗಾರಿಗೆ ಇನ್ನಷ್ಟು ಅನುದಾನ ಹೆಚ್ಚಿಸಬೇಕಿದೆ. ಮೊದಲ ಹಂತವಾಗಿ ಮಾಜಿ ಸಚಿವೆ ಉಮಾಶ್ರೀಯವರಿದ್ದಾಗ ₹೨೫ ಕೋಟಿ, ನಾನಿದ್ದಾಗ ₹೧೫ ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಇದೀಗ ಹೊಸ ಕಮಾನುಗಳು, ಹಿನ್ನೀರಿಗೆ ಪೂರಕವಾಗಿ ಸೇತುವೆ ಕಾಮಗಾರಿಗೆ ಇನ್ನೂ ₹೧೦ ಕೋಟಿ ಹಣ ಬೇಕಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪೂರ, ಅಲ್ಲಿಯೇ ಇದ್ದ ರಸ್ತೆ ಅಭಿವೃದ್ಧಿ ನಿಗಮ ಅಧಿಕಾರಿಗೆ ಖಡಕ್ ತಾಕೀತು ಮಾಡಿ, ಸೇತುವೆ ವಿಷಯದ ಸಮಗ್ರ ಮಾಹಿತಿಯನ್ನು ಇದೇ ಡಿ.೩೦ ರೊಳಗೆ ಸರ್ಕಾರಕ್ಕೆ ತಲುಪಿಸುವ ಕಾರ್ಯ ಆಗಬೇಕು ಸೂಚಿಸಿದರು.

ಎಳೆ ನೀರು ಕುಡಿಸಿದ ಸಚಿವರು: ಸತ್ಯಾಗ್ರಹ ಕೈಬಿಟ್ಟು ಹೋರಾಟ ಮೊಟಕುಗೊಳಿಸುವಲ್ಲಿ ಯಶಸ್ವಿಯಾದ ಸಚಿವ ತಿಮ್ಮಾಪೂರ ಸತ್ಯಾಗ್ರಹಿಗಳಿಗೆ ಎಳೆ ನೀರು ಕುಡಿಸುವ ಮೂಲಕ ಸತ್ಯಾಗ್ರಹ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

ಇದೇ ಸಂದರ್ಭ ಸಿದ್ದು ಕೊಣ್ಣೂರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ, ತಹಸೀಲ್ದಾರ ಗಿರೀಶ ಸ್ವಾದಿ, ಸತ್ಯಾಗ್ರಹನಿರತ ಡಾ. ರವಿ ಜಮಖಂಡಿ, ಶಂಕರ ಸೊರಗಾಂವಿ, ಬಾಪೂರೆ, ಡಾ. ಪದ್ಮಜೀತ ನಾಡಗೌಡ, ಸಂಜು ಜೋತಾವರ ಹಾಗೂ ಹಿರಿಯರಾದ ರಾಮಣ್ಣ ಹುಲಕುಂದ, ನೀಲಕಂಠ ಮುತ್ತೂರ, ಧರೆಪ್ಪ ಉಳ್ಳಾಗಡ್ಡಿ, ಸಂಜು ತೆಗ್ಗಿ, ರಾಜು ಭದ್ರನ್ನವರ ಸೇರಿದಂತೆ ಅನೇಕರಿದ್ದರು.