ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಗೆ ಸಚಿವರ ಭೇಟಿ : ಡಿ.ಕೆ.ಶಿವಕುಮಾರ್‌

| Published : Jul 02 2024, 01:41 AM IST / Updated: Jul 02 2024, 12:46 PM IST

ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಗೆ ಸಚಿವರ ಭೇಟಿ : ಡಿ.ಕೆ.ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೋಮವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಿದರು.

 ಬೆಂಗಳೂರು :  ಸಚಿವರು ಕಡ್ಡಾಯವಾಗಿ ಪ್ರತಿ ತಿಂಗಳಿಗೊಮ್ಮೆ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಹದಿನೈದು ದಿನಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಲಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಕೆಪಿಸಿಸಿ ಕಚೇರಿಗೆ ಆಗಮಿಸಿ ಈ ಸಂಪ್ರದಾಯಕ್ಕೆ ಚಾಲನೆ ನೀಡಲಿದ್ದಾರೆ.

ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೋಮವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಮಾತನಾಡಿದ ಅವರು ಕೆಪಿಸಿಸಿ ಕಚೇರಿಯಲ್ಲಿ ಒಂದು ಬಾರಿಗೆ ಇಬ್ಬರು ಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಕಚೇರಿಗೆ ಆಗಮಿಸುವ ಮೂಲಕ ಉದ್ಘಾಟಿಸಲಿದ್ದು, ಮುಖ್ಯಮಂತ್ರಿಗಳ ಭೇಟಿಗೆ ಸದ್ಯದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಶಾಸಕರ ಮನೆಯಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ:ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಡ್ಡಾಯವಾಗಿ ಪಕ್ಷದ ಕಚೇರಿಗಳಲ್ಲೇ ಸಭೆ ನಡೆಸಬೇಕು. ಪಕ್ಷದ ಸಭೆಗಳನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಶಾಸಕರ ಮನೆಗಳಲ್ಲಿ ನಡೆಸುವಂತಿಲ್ಲ. ಶಾಸಕರು ಮನೆಯಲ್ಲಿ ಸಭೆ ನಡೆಸಿದರೆ ಸಭೆಗೆ ಶಾಸಕರ ಬೆಂಬಲಿಗರ ಹೊರತಾಗಿ ಬೇರೆಯ ಪದಾಧಿಕಾರಿಗಳು ಬರುವುದಿಲ್ಲ. ಹೀಗಾಗಿ ಕಡ್ಡಾಯವಾಗಿ ಪಕ್ಷದ ಕಚೇರಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇನ್ನು ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಮೂರು ಸಭೆಗಳಿಗೆ ಗೈರುಹಾಜರಾದರೆ ವಿಶ್ರಾಂತಿ ನೀಡಲಾಗುವುದು. ಕೂಡಲೇ ಬೇರೆಯವರಿಗೆ ಅಧಿಕಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಎನ್‌ಡಿಎ ಹಗರಣಗಳ ವಿರುದ್ಧ ಹೋರಾಟ:

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಷೇರು ಪೇಟೆ ಹಗರಣ, ನೀಟ್ ಮತ್ತು ನೆಟ್ ಹಗರಣ ನಡೆದಿದೆ. ಇದರ ಕುರಿತು ಖಂಡನಾ ನಿರ್ಣಯ ಅಂಗೀಕಾರ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಜತೆಗೆ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಉಪಚುನಾವಣೆಯನ್ನು ಎದುರಿಸಲು ಮೂರು ತಂಡಗಳನ್ನು ರಚಿಸಿದ್ದು, ಅವುಗಳಿಂದ ವರದಿ ಪಡೆದು ರಣತಂತ್ರ ರೂಪಿಸಲು ಹಾಗೂ ಎಲ್ಲಾ ವರ್ಗಗಳನ್ನು ಸೆಳೆಯಲು ಸಾರಿಗೆ, ಕೊಳೆಗೇರಿ, ಸಹಕಾರಿ ವಿಭಾಗಗಳನ್ನು ಪ್ರಾರಂಭಿಸಲು ತೀರ್ಮಾನಿಸಿರುವುದಾಗಿ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.ಇದೇ ವೇಳೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಕ್ಷದ ಸಂಸದೀಯ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯಿತು.

ರಾಜ್ಯ ಮಟ್ಟದ ಸತ್ಯಶೋಧನಾ ಸಮಿತಿಗೆ ನಿರ್ಧಾರ

ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಅಧ್ಯಯನ ನಡೆಸಲು ಪ್ರತಿ ರಾಜ್ಯಗಳಿಗೆ ಎಐಸಿಸಿ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದ್ದು, ಜು.4ರಂದು ಎಐಸಿಸಿ ಸಮಿತಿಯು ರಾಜ್ಯಕ್ಕೆ ಆಗಮಿಸಲಿದೆ. ಇದಲ್ಲದೆ, ಫಲಿತಾಂಶದ ಪರಾಮರ್ಶೆಗೆ ರಾಜ್ಯ ಮಟ್ಟದಲ್ಲೂ ಒಂದು ಸತ್ಯ ಪರಿಶೋಧನಾ ಸಮಿತಿ ರಚನೆ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಾಲ್ಕು ವಿಭಾಗವಾರು ಪರಿಶೀಲನಾ ಸಭೆ ನಡೆಸಲು ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, 19 ಮಂದಿ ಸಚಿವರ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಸತ್ಯ ಶೋಧನಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರುತ್ತಿರುವ ಎಐಸಿಸಿ ಸಮಿತಿಯು ಪ್ರತಿ ಕ್ಷೇತ್ರಗಳಿಗೆ ಭೇಟಿ ನೀಡಿ ವರದಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಮಟ್ಟದ ಸತ್ಯ ಶೋಧನಾ ಸಮಿತಿ ವರದಿಯನ್ನು ಸಿದ್ಧಪಡಿಸಿ ಕೇಂದ್ರದ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಯಿತು.

ಸೋಲಿನ ಬಗ್ಗೆ ಕ್ಷೇತ್ರವಾರು ಅಧ್ಯಯನ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಫಲಿತಾಂಶ ಸಮಾಧಾನ ತಂದಿಲ್ಲ. 15ಕ್ಕೂ ಹೆಚ್ಚು ಸ್ಥಾನ ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆ ಏಕೆ ಸುಳ್ಳಾಯಿತು? ಯಾಕೆ ಸೋಲಾಯಿತು ಎಂಬ ಬಗ್ಗೆ ಪರಾಮರ್ಶೆಗೆ ಸತ್ಯ ಶೋಧನಾ ಸಮಿತಿ ರಚಿಸುತ್ತಿದ್ದೇವೆ. ಪ್ರತಿ ಕ್ಷೇತ್ರವಾರು ಅಧ್ಯಯನ ನಡೆಸಿ ವರದಿ ಪಡೆಯಲಾಗುವುದು.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ