ಕನ್ನಡಪ್ರಭ ವಾರ್ತೆ ಅರಸೀಕೆರೆ
ನಾಲ್ಕು ದಶಕಗಳ ರಾಜಕೀಯ ಪಯಣದ ಬಳಿಕ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿರುವ ಹಿನ್ನೆಲೆ ನೂತನ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಗರ ಸಜ್ಜಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.ಸಚಿವರ ಸ್ವಾಗತಕ್ಕಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ-206, ಬಿ.ಎಚ್. ರಸ್ತೆ ಹಾಗೂ ಹಾಸನ ರಸ್ತೆಯುದ್ದಕ್ಕೂ ಸಚಿವರಿಗೆ ಶುಭಾಶಯ ಕೋರುವ ಬೃಹತ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ವಿವಿಧೆಡೆ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್ ನೇತೃತ್ವದಲ್ಲಿ ನಗರದ ಪಿ.ಪಿ. ವೃತ್ತದಲ್ಲಿ ಸುಮಾರು 60 ಅಡಿ ಎತ್ತರದ ಶಿವಲಿಂಗೇಗೌಡರ ಬೃಹತ್ ಕಟೌಟ್ ನಿರ್ಮಿಸಲಾಗಿದೆ. ಸಾಮಾನ್ಯ ರೈತ ಕುಟುಂಬದಿಂದ ರಾಜಕೀಯ ಜೀವನ ಆರಂಭಿಸಿ ಕ್ಷೇತ್ರದ ಜನರ ಬೆಂಬಲದೊಂದಿಗೆ ಸಚಿವ ಸ್ಥಾನಕ್ಕೇರಿರುವ ಅವರ ರಾಜಕೀಯ ಬೆಳವಣಿಗೆಯನ್ನು ಪ್ರತಿಬಿಂಬಿಸುವಂತಿರುವ ಈ ಕಟೌಟ್ ಸಾರ್ವಜನಿಕರ ಗಮನ ಸೆಳೆಯುತ್ತಿದೆ.ಸಚಿವರ ಸ್ವಾಗತ ಕಾರ್ಯಕ್ರಮ ಸೋಮವಾರ ಸಂಜೆ 4 ಗಂಟೆಗೆ ನಗರದ ಹಾಸನ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗಲಿದೆ. ಅಲ್ಲಿಂದ ಪಿ.ಪಿ. ವೃತ್ತದವರೆಗೆ ನೂತನ ಸಚಿವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಬಳಿಕ ಬೃಹತ್ ಪುಷ್ಪಹಾರ ಹಾಗೂ ಹಣ್ಣಿನ ಹಾರ ಸಮರ್ಪಿಸಿ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಲು ಸಿದ್ಧತೆ ನಡೆಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.