ಹಾವೇರಿ: ಪಂಚ ಗ್ಯಾರಂಟಿ ಜತೆಗೆ ರಾಜ್ಯ ಸರ್ಕಾರ ಭೂ ಗ್ಯಾರಂಟಿ ಯೋಜನೆಯಡಿ ಬಡವರಿಗೆ ಹಕ್ಕು ಪತ್ರ ವಿತರಣೆಗೆ ಮುಂದಾಗಿದ್ದು, ಯಾವುದೇ ಅಧಿಕಾರಿಗಳು, ಸಿಬ್ಬಂದಿ ಫಲಾನುಭವಿಗಳಿಂದ ಲಂಚ ಪಡೆದಿರುವುದು ಗೊತ್ತಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.
ಸಮಾವೇಶ ಆಯೋಜಿಸಿರುವ ನಗರದ ಹೊರವಲಯದ ಅಜ್ಜಯ್ಯನ ಗುಡಿ ಬಳಿಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ವಿವಿಧೆಡೆ ಕೆಲ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಫಲಾನುಭವಿಗಳಿಂದ ಲಂಚಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಕೇಳಿಬಂದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಆದರೆ ನನ್ನ ಗಮನಕ್ಕೆ ಇದುವರೆಗೂ ಯಾವುದೇ ದೂರು ಕೇಳಿಬಂದಿಲ್ಲ. ಫಲಾನುಭವಿಗಳು ನೇರವಾಗಿ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.ರಾಣಿಬೆನ್ನೂರು ತಾಲೂಕಿನ ಹಿರೆಬಿದರಿ ಗ್ರಾಮದಲ್ಲಿ ಗೋಮಾಳ ಜಾಗವನ್ನು ಪಟ್ಟಾ ಮಾಡಿರುವ ಬಗ್ಗೆ ಹಾಗೂ ಮನೆ ಇರುವವರೇ ಮತ್ತೊಂದು ಮನೆಯ ಪಟ್ಟಾ ಪಡೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದರು. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು.ಸರ್ಕಾರದಿಂದ 6ನೇ ಗ್ಯಾರಂಟಿ ಪಂಚ ಗ್ಯಾರಂಟಿಗಳ ಜತೆಗೆ 6ನೇಯದಾಗಿ ಭೂ ಗ್ಯಾರಂಟಿ ನೀಡುತ್ತಿದ್ದೇವೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಅಪಾರ ಮುತುವರ್ಜಿ ವಹಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಮೊದಲ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಪ್ರಸ್ತುತ ಹಾವೇರಿಯಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.9 ಜಿಲ್ಲೆಗಳ ಪೈಕಿ ಹೆಚ್ಚು ಫಲಾನುಭವಿಗಳು ಹಾವೇರಿ ಜಿಲ್ಲೆಯಲ್ಲಿದ್ದಾರೆ. ಅಲ್ಲದೇ ಹಾವೇರಿ ಉತ್ತರ ಕರ್ನಾಟಕದ ಹೆಬ್ಬಾಗಿಲು. ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಶಾಸಕರು ಮತ್ತು ಸಂಸದರು ಸಹ ಈ ಸಾಧನೆಯ ಹಿಂದೆ ಶ್ರಮ ವಹಿಸಿದ್ದಾರೆ ಎಂದರು.ಈ ವೇಳೆ ಶಾಸಕ ಬಸವರಾಜ ಶಿವಣ್ಣನವರ, ಅಜ್ಜಂಪೀರ ಖಾದ್ರಿ, ಸಂಜೀವ ಕುಮಾರ ನೀರಲಗಿ, ಎಸ್.ಎಫ್.ಎನ್. ಗಾಜಿಗೌಡ್ರ, ಕೊಟ್ರೇಶಪ್ಪ ಬಸಗಣ್ಣಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋಧಾ ವಡಗಂಟಿ ಮೊದಲಾದವರು ಇದ್ದರು. ತಪ್ಪಿತಸ್ಥ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ: ಹಾವೇರಿ ಶಹರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ ಪವಾರ್ ಖಾಸಗಿ ಸಂಸ್ಥೆಯ ಚುನಾವಣೆಯ ವಿಜೇತರಿಂದ ಠಾಣೆಯಲ್ಲೇ ಸನ್ಮಾನ ಸ್ವೀಕರಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಖಡಕ್ ಸೂಚನೆ ನೀಡಿದರು.