ಸಚಿವ ಶಿವಾನಂದ ತೇಜೋವಧೆಗೆ ಸಂಚು ಮಾಡಿದ್ದಾರೆ: ಸಾಬು ಮಾಳಿ

| Published : Dec 29 2023, 01:32 AM IST

ಸಚಿವ ಶಿವಾನಂದ ತೇಜೋವಧೆಗೆ ಸಂಚು ಮಾಡಿದ್ದಾರೆ: ಸಾಬು ಮಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಶಿವಾನಂದನವರು ಕೃಷಿಪರ ಆರ್ಥಿಕ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದು ಸಮರ್ಥಿಸಿಕೊಂಡ ಸಾಬು ಮಾಳಿ ಅವರು, ಸಚಿವ ಶಿವಾನಂದ ಪಾಟೀಲ ವಿರುದ್ಧ ತೇಜೋವಧೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಐಗಳಿ

ಸಚಿವ ಶಿವಾನಂದ ಪಾಟೀಲ ಅವರು ರೈತರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸತ್ಯಕ್ಕೆ ದೂರವಾಗಿದ್ದು, ವಿರೋಧ ಪಕ್ಷದವರು ಪೂರ್ತಿ ವಿಡಿಯೋ ನೋಡದೇ ಅಪಾದನೆ ಮಾಡುತ್ತಿರುವುದು ರಾಜಕೀಯದ ಲಾಭಕ್ಕಾಗಿ ವಿನಃ ಅವರು ಮಾಡುವ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಪಿಕೆಪಿಎಸ್ ಮಾಜಿ ಅಧ್ಯಕ್ಷ ಹಾಗೂ ರೈತ ಮುಖಂಡ ಸಾಬು ಮಾಳಿ ಹೇಳಿದರು.

ಸಮೀಪದ ಕೊಕಟನೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.24 ಸುಟ್ಟಟ್ಟಿ ಗ್ರಾಮದ ಪಿಕೆಪಿಎಸ್ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡುತ್ತ ರೈತರು ಒಂದೇ ಬೆಳೆಯನ್ನು ನೆಚ್ಚಿ ಕೃಷಿ ಮಾಡದೇ ದ್ರಾಕ್ಷಿ, ಕಬ್ಬು, ಮೆಕ್ಕೆಜೋಳ, ದಾಳಿಂಬೆ ಸೇರಿದಂತೆ ಸುಧಾರಿತ ಬೆಳೆಗಳನ್ನು ಬೆಳೆಯಬೇಕು. ಅಂದಾಗ ಬರಗಾಲ ಆವರಿಸಿದರೂ ಯಾವುದೇ ನಷ್ಟ ಆಗುವುದಿಲ್ಲ. ಸಾಲ ಪಡೆಯುವ ಪ್ರಶ್ನೆಯೇ ಬರುವುದಿಲ್ಲ. ತಿರುಗಿ ಸರ್ಕಾರಕ್ಕೆ ರೈತರೇ ಸಾಲ ಕೊಡುವಷ್ಟು ಸದೃಢರಾಗುತ್ತಾರೆ ಎಂದು ರೈತರ ಪರವಾಗಿ ಮಾತನಾಡಿದ್ದಾರೆ. ಆದರೆ, ಪೂರ್ಣ ವಿಡಿಯೋದಲ್ಲಿನ ಸಣ್ಣ ವಿಡಿಯೋ ಇಟ್ಟುಕೊಂಡು ಸಚಿವರು ರೈತರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆಂದು ಬಿಂಬಿಸಲು ಹೊರಟಿರುವುದು ಅವರ ತೇಜೋವಧೆಗೆ ಮಾಡಿದ ಸಂಚಾಗಿದೆ ಎಂದರು.

25 ವರ್ಷಗಳ ಕಾಲ ವಿಜಯಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಒಕ್ಕಲುತನ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಿದ ಪಾಟೀಲರು ಕೃಷಿಪರ ಆರ್ಥಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಭಾಷಣವನ್ನು ತಪ್ಪಾಗಿ ಬಿಂಬಿಸಿ ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುವಲ್ಲಿ ವಿರೋಧ ಪಕ್ಷಗಳು ಯತ್ನಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ರೈತರು ವಿರೋಧ ಪಕ್ಷದವರ ಮಾತಿಗೆ ಕಿವಿಗೊಡದೇ ಸಚಿವರು ರೈತರಿಗಾಗಿ ಮಾಡಿರುವ ಕಾರ್ಯವನ್ನು ಗಮನಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಅನಿಲ ಚವ್ಹಾಣ ಮಾತನಾಡಿ, ಸಚಿವ ಶಿವಾನಂದ ಪಾಟೀಲರ ಇಡೀ ಕಾರ್ಯಕ್ರಮದ ಭಾಷಣ ಕೇಳಬೇಕು. ಆಗ ಅವರು ರೈತಪರ ಕಾಳಜಿ ತೊರಿರುವುದು ಗೊತ್ತಾಗುತ್ತದೆ. ಮುಂದೆ. ಹಿಂದೆ. ಪೂರ್ಣ ವಿಡಿಯೋ ನೋಡದೇ ಮಧ್ಯದ ವಿಡಿಯೋದಲ್ಲಿನ ಮಾತನ್ನು ಪ್ರಸಾರ ಮಾಡಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಇದು ನಮಗೆ ಸುದ್ಧಿ ಅಘಾತ ತಂದಿದೆ ಎಂದರು.

ಈ ವೇಳೆ ಮುಖಂಡರಾದ ಮಹಾದೇವ ಅವಟಿ, ಪಿರಾಸಾಬ ನದಾಫ್, ಶಂಕರ ಹರಳಿ, ಮಾಯಪ್ಪ ಅಜ್ಜಣಗಿ, ಬಸಪ್ಪ ಕೊಳಂಬಿ, ಸತ್ಯಪ್ಪ ಸವದಿ, ಮಹಾದೇವ ಹರಳೆ, ಪಿಕೆಪಿಎಸ್ ಸಂಘದ ಅಧ್ಯಕ್ಷ ಮಂಜುನಾಥ ಅಂಬಾಜಿ, ಸಂಬಾಜಿ ಗುರ್ಲಾಪುರ, ಲಕ್ಷ್ಮಣ ಕರ್ಜಗಿ, ಹಣಮಂತ ಅರ್ದಾವೂರ, ಬಸಪ್ಪ ಕಂಕಣವಾಡಿ, ದಾನಪ್ಪ ಮಲಾಬಾದಿ ಸೇರಿದಂತೆ ಹಲವರು ಇದ್ದರು.