ಸಿಟಿ ಇನ್ ಸ್ಟಿಟ್ಯೂಟ್ ಅವ್ಯವಹಾರ ತನಿಖೆಗೆ ಸಚಿವ ಸುಧಾಕರ್ ಅಡ್ಡಿ

| Published : Oct 02 2024, 01:05 AM IST

ಸಾರಾಂಶ

ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿರುವ ಅವ್ಯವಹಾರದ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಡ್ಡಿ ಪಡಿಸುತ್ತಿದ್ದಾರೆಂದು ಇನ್ ಸ್ಟಿಟ್ಯೂಟ್ ಸದಸ್ಯ ಖಾದರ್ ಖಾನ್ ಆರೋಪಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿರುವ ಅವ್ಯವಹಾರದ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಡ್ಡಿ ಪಡಿಸುತ್ತಿದ್ದಾರೆಂದು ಇನ್ ಸ್ಟಿಟ್ಯೂಟ್ ಸದಸ್ಯ ಖಾದರ್ ಖಾನ್ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ನಿರ್ದೇಶಕ ಡಿವಿಟಿ. ಕರಿಯಪ್ಪ ಸೆಪ್ಟಂಬರ್ 5 ರಂದು ದೂರು ನೀಡಿದ್ದು, ಎಫ್ಐ ಆರ್ ದಾಖಲಾಗಿದೆ. ದೂರು ನೀಡಿ ಇಪ್ಪತ್ತೈದು ದಿನ ಕಳೆದರೂ ಪೊಲೀಸರು ಆರೋಪಿಗಳ ಬಂಧಿಸುವಲ್ಲಿ ಉದಾಸೀನ ತೋರಿದ್ದಾರೆ. ಪ್ರಕರಣದ ಎ1 ಹಾಗೂ ಎ3 ಆರೋಪಿಗಳು ಕ್ಲಬ್ ಗೆ ಬಂದು ಹೋಗುತ್ತಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ಉದಾಸೀನ ತೋರಿದ್ದಾರೆ ಎಂದು ದೂರಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ಎ3 ಆರೋಪಿ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಂಬಂಧಿಯಾಗಿದ್ದಾರೆ. ಈಗಾಗಲೇ ಎರಡು ಬಾರಿ ಎಸ್ಪಿ ಹಾಗೂ ಡಿಸಿ ಅವರ ಕರೆಯಿಸಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೆ ಆರೋಪಿಗಳನ್ನು ಬಂಧಿಸಬಾರದೆಂಬ ನಿರ್ದೇಶನ ನೀಡಿದ್ದಾರೆ. ಹಾಗಾಗಿ ಪೊಲೀಸರು ಹಿಂಜರಿಯುತ್ತಿದ್ದಾರೆ. ಬಿಜೆಪಿ ಶಾಸಕ ಮುನಿರತ್ನಂ ಅವರ ಮೇಲೆ ಎಫ್ಐಆರ್ ದಾಖಲಾಗಿ ಒಂದೇ ದಿನಕ್ಕೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಚಿತ್ರದುರ್ಗದಲ್ಲಿ ಏಕೆ ಸಾಧ್ಯವಾಗಿಲ್ಲವೆಂದು ಖಾದರ್ ಖಾನ್ ಪ್ರಶ್ನಿಸಿದರು.ಸಂಸ್ಥೆಯ ಮತ್ತೋರ್ವ ಸದಸ್ಯ ವೆಂಕಟಶಿವರೆಡ್ಡಿ ಮಾತನಾಡಿ, ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ಅವ್ಯವಹಾರವಾಗಿರುವುದರ ಕುರಿತು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಗ್ರಹಿಸಿದ್ದಾರೆ. ಸಿಟಿ ಇನ್ ಸ್ಟ್ರಿಟ್ಯೂಟ್ ಗೆ ಸಂಬಂಧಿಸಿದ 2020 ನೇ ಸಾಲಿನಿಂದ ಇಲ್ಲಿಯವರೆಗೆ ಲೆಕ್ಕ ಪತ್ರ ಸ್ಟೇಟ್ ಮೆಂಟ್ ಪರಿಶೀಲಿಸಿ, ಹಣದ ವಹಿವಾಟಿನ ಕುರಿತು ಲೆಕ್ಕ ಪರಿಶೋಧನೆ ನಡೆಸಿ ಲೋಪದೋಷಗಳು ಇವೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ಸೆಪ್ಟಂಬರ್ 12 ರಂದು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದರು.ಇದಲ್ಲದೇ ಸಹಕಾರ ಇಲಾಖೆ ಉಪ ನಿಬಂಧಕರ ಕಚೇರಿಯ ಅಭಿಪ್ರಾಯದಲ್ಲಿಯೂ ಸದಸ್ಯತ್ವ ನೀಡುವಾಗ ಬೈಲಾ ಉಲ್ಲಂಘನೆ ಮಾಡಿರುವುದು ಸ್ಪಷ್ಟಪಡಿಸಲಾಗಿದೆ. ವಾಸ್ತವಾಂಶ ಹೀಗಿರುವಾಗ ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಉದಾಸೀನ ತೋರುವುದು ಅರ್ಥವಾಗದಂತಾಗಿದೆ. ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಅವರ ಮೇಲೂ ಸಚಿವ ಡಿ. ಸುಧಾಕರ್ ಪ್ರಭಾವ ಬೀರಿರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗದಂತಾಗಿದೆ ಎಂದು ವೆಂಕಟಶಿವರೆಡ್ಡಿ ಆಪಾದಿಸಿದರು.ಇನ್ ಸ್ಟಿಟ್ಯೂಟ್ ಮಾಜಿ ಕಾರ್ಯದರ್ಶಿ ಟಿಎಸ್ಎನ್. ಜಯಣ್ಣ, ಡಿವಿಟಿ ಕರಿಯಪ್ಪ, ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಆನಂದ್ ಸುದ್ದಿಗೋಷ್ಠಿಯಲ್ಲಿದ್ದರು.