ಪುತ್ರ ವಿನಯ್ ರಾಜಕೀಯ ಪ್ರವೇಶಕ್ಕಾಗಿ ಸಚಿವ ತಿಮ್ಮಾಪೂರ ಕಸರತ್ತು
KannadaprabhaNewsNetwork | Published : Oct 17 2023, 12:30 AM IST
ಪುತ್ರ ವಿನಯ್ ರಾಜಕೀಯ ಪ್ರವೇಶಕ್ಕಾಗಿ ಸಚಿವ ತಿಮ್ಮಾಪೂರ ಕಸರತ್ತು
ಸಾರಾಂಶ
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಮ್ಮ ಪುತ್ರ ವಿನಯ್ ಸಂಗಡ ಸೋಮವಾರ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸೂಕ್ಷ್ಮವಾಗಿ ಪುತ್ರ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸುವ ವಿಷಯ ಪ್ರಸ್ತಾಪಿಸಿದರು.
ಕೋಟೆನಾಡಿ ಮಠಗಳಿಗೆ ಪುತ್ರ ವಿನಯ್‌ರೊಂದಿಗೆ ಭೇಟಿ । ಸುದ್ದಿ ಗೋಷ್ಠಿಯಲ್ಲಿ ಮಗನನ್ನೆ ಪ್ರಶ್ನೆ ಮಾಡಿ ಎಂದ ತಿಮ್ಮಾಪೂರ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಮ್ಮ ಪುತ್ರ ವಿನಯ್ ಸಂಗಡ ಸೋಮವಾರ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸೂಕ್ಷ್ಮವಾಗಿ ಪುತ್ರ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸುವ ವಿಷಯ ಪ್ರಸ್ತಾಪಿಸಿದರು. ಬೆಳಗ್ಗೆಯೇ ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಭೇಟಿ ಆಶೀರ್ವಾದ ಪಡೆದರು. ತಮ್ಮ ಪುತ್ರನ ಪರಿಚಿಯಿಸಿದರು. ಅರ್ಧ ತಾಸಿಗೂ ಹೆಚ್ಚುಕಾಲ ಚರ್ಚಿಸಿದರು. ಮದ್ಯದಂಗಡಿ ತೆರೆಯುವ ವಿಚಾರವ ಹರವಿದ ಶ್ರೀಗಳು ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಡಿಸಿದರು.ನಂತರ ನೇರವಾಗಿ ಸಾಣೇಹಳ್ಳಿಗೆ ತೆರಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಗಳ ಆಶೀರ್ವಾದ ಪಡೆದರು. ಈ ವೇಳೆ ತಮ್ಮ ಪುತ್ರನ ರಾಜಕೀಯ ಆಕಾಂಕ್ಷೆ ಬಗ್ಗೆ ಪರೋಕ್ಷವಾಗಿ ಸಚಿವ ತಿಮ್ಮಾಪೂರ ಪ್ರಸ್ತಾಪಿಸಿದ್ದಾರೆ. ಇದಾದ ಬಳಿಕೆ ನೇರವಾಗಿ ಚಿತ್ರದುರ್ಗ ಯಾದವ ಗುರುಪೀಠಕ್ಕೆ ಆಗಮಿಸಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿಗಳ ಭೇಟಿ ಮಾಡಿ ಆಶೀರ್ವಾದ ಪಡೆದರು. ಅಂತಿಮವಾಗಿ ಮಾದಾರ ಗುರುಪೀಠಕ್ಕೆ ತೆರಳಿ ಚೆನ್ನಯ್ಯ ಸ್ವಾಮೀಜಿಗಳ ಗೌರವಿಸಿದರು. ಈ ವೇಳೆ ವಿನಯ್ ವಿಚಾರವಾಗಿ ತಿಮ್ಮಾಪೂರ ಏನೂ ಹೇಳದಿದ್ದರೂ ಅಲ್ಲಿ ನೆರೆದಿದ್ದ ಕಾಂಗ್ರೆಸ್ ಮುಖಂಡರುಗಳು ಮೊದಲೇ ಚೆನ್ನಯ್ಯ ಸ್ವಾಮೀಜಿಗೆ ವರದಿ ಒಪ್ಪಿಸಿದ್ದರು. ತಿಮ್ಮಾಪೂರ ಸಾಹೇಬರು ಬರ್ತಿದ್ದಾರೆ, ಅವರ ಜೊತೆ ಮಗ ವಿನಯ್ ಕೂಡಾ ಇದ್ದಾರೆ. ಪಾರ್ಲಿಮೆಂಟ್ ಚುನಾವಣೆಗೆ ಪಿಚ್ ನೋಡ್ಕಂಡು ಹೋಗಲು ಬಂದಿದ್ದಾರೆ. ಮಗನನ್ನು ಇಲ್ಲಿಂದ ಚುನಾವಣೆಗೆ ನಿಲ್ಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯ ರವಾನಿಸಿದ್ದರು. ಎಲ್ಲವನ್ನು ಕೇಳಿಸಿಕೊಂಡಿದ್ದ ಚೆನ್ನಯ್ಯ ಸ್ವಾಮೀಜಿ, ರಾಜಕೀಯ ವಿಚಾರವಾಗಿ ಏನೂ ಮಾತನಾಡಲಿಲ್ಲ. ಉಭಯಕುಶಲೋಪರಿ ಮಾತನಾಡಿ ಬೀಳ್ಕೊಟ್ಟರು. ಇದಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪೂರ, ಮೊದಲಿನಿಂದಲೂ ಜಿಲ್ಲೆಯ ಮಠಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ಈಗ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ನನ್ನೊಟ್ಟಿಗೆ ಮಗ ವಿನಯ್ ಕೂಡಾ ಆಗಮಿಸಿದ್ದಾನೆಂದರು. ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಅವನೂ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದಾನೆ. ಸಹಜವಾಗಿ ರಾಜಕೀಯದ ಆಸೆಗಳು ಇರುತ್ತವೆ. ಅವನನ್ನೇ ಪ್ರಶ್ನೆ ಮಾಡಿ ಎಂದಷ್ಟೇ ಹೇಳಿದರು.