ಕನ್ನಡಪ್ರಭ ಪತ್ರಿಕೆ ಸಮಾಜ ಓರೆಕೋರೆಗಳನ್ನು ತಿದ್ದುವಲ್ಲಿ ತನ್ನದೇ ಛಾಪು ಮೂಡಿಸಿದೆ : ಸಚಿವ ತಿಮ್ಮಾಪೂರ

| Published : Dec 19 2024, 01:30 AM IST / Updated: Dec 19 2024, 12:57 PM IST

ಕನ್ನಡಪ್ರಭ ಪತ್ರಿಕೆ ಸಮಾಜ ಓರೆಕೋರೆಗಳನ್ನು ತಿದ್ದುವಲ್ಲಿ ತನ್ನದೇ ಛಾಪು ಮೂಡಿಸಿದೆ : ಸಚಿವ ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ತನ್ನತನ ಉಳಿಸಿಕೊಂಡಿದ್ದು, ಕನ್ನಡಪ್ರಭ ಪತ್ರಿಕೆ ತನ್ನ ಸುದೀರ್ಘ ಅವಧಿಯಲ್ಲಿ ಸಮಾಜ ಓರೆಕೋರೆಗಳನ್ನು ತಿದ್ದುವಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

 ಬೆಳಗಾವಿ :  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ತನ್ನತನ ಉಳಿಸಿಕೊಂಡಿದ್ದು, ಕನ್ನಡಪ್ರಭ ಪತ್ರಿಕೆ ತನ್ನ ಸುದೀರ್ಘ ಅವಧಿಯಲ್ಲಿ ಸಮಾಜ ಓರೆಕೋರೆಗಳನ್ನು ತಿದ್ದುವಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ಬೆಳಗಾವಿ ಪ್ರಾದೇಶಿಕ ಕಚೇರಿಗೆ ಬುಧವಾರ ಸೌಹಾರ್ದಯುತ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಪತ್ರಿಕೆ ಹಲವಾರು ವಿಷಯಗಳನ್ನು ಓದುಗರಿಗೆ ತಿಳಿಸುತ್ತ ಬಂದಿದೆ ಎಂದು ಹೇಳಿದರು.

ವರದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಎಡವಟ್ಟಾದರೂ ರಾಜಕೀಯ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ. ಪತ್ರಿಕೆಯಲ್ಲಿ ಬರುವ ಸುದ್ದಿಗಳು ಸಣ್ಣ ವಿಷಯ ಎನಿಸಿದರೂ ರಾಜಕರಣಿಗಳ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ವ್ಯಕ್ತಿತ್ವ ಹೆಚ್ಚಿಸಲೂಬಹುದು. ತಗ್ಗಿಸಲೂಬಹುದು. ಇದಕ್ಕೆ ನಾನೇ ಉದಾಹರಣೆ. 

ಎಸ್‌.ಬಂಗಾರಪ್ಪ ಸಿಎಂ ಮಾಡುವಾಗ ಬಂಗಾರಪ್ಪ ಬೆಂಬಿಲಿಸಿ ಹೇಳಿಕೆ ನೀಡಿದ್ದೆ. ಆದರೆ, ಮರುದಿನ ಅವರ ವಿರುದ್ಧ ಹೇಳಿಕೆ ನೀಡಿದ್ದೇನೆಂದು ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಯಿತು. ಬಂಗಾರಪ್ಪ ಸಿಎಂ ಇರೋವರಿಗೆ ನನ್ನನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ. ನಂತರ ಲಂಕೇಶ್‌ ಪತ್ರಿಕೆಯಲ್ಲಿ ಸಿಎಂ ಇಳಿಸುವಲ್ಲಿ ಬಿಜಾಪುರ ಜಿಲ್ಲೆ ರಾಜಕಾರಣಿಗಳ ಪಾತ್ರ ಬಹುಮುಖ್ಯವಾಗಿದೆ. ಹಿಂದೆ ವಿರೇಂದ್ರ ಪಾಟೀಲರನ್ನು ಕೆಳಗಿಳಿಸುವಲ್ಲಿ ಅದೇ ಜಿಲ್ಲೆಯ ರಾಜಕಾರಣ ಕಾರಣವಾಗಿತ್ತು. ಈಗಲೂ ಸಹ ಎಸ್‌.ಬಂಗಾರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಇಳಿಸಲು ತಿಮ್ಮಾಪೂರ ಪ್ರಯತ್ನ ನಡೆಸಿದ್ದಾರೆ ಎಂದು ವರದಿ ಪ್ರಕಟಿಸಿದರು. ಸಿಎಂ ಇಳಿಸುವಂತಹ ಈ ರಾಜಕಾರಣಿ ಯಾರು ಎಂದು ಎಲ್ಲರೂ ಕುತೂಹಲ ಮೂಡಿ, ದಿನಬೆಳಗಾಗುವುದಲ್ಲಿ ಫೇಮಸ್ ಆದೆ.

ಕನ್ನಡಪ್ರಭ ಪತ್ರಿಕೆಯ ಜೊತೆಗಿನ ತಮ್ಮ ಒಡನಾಟ ಸ್ಮರಿಸಿದ ಸಚಿವರು, ಕನ್ನಡ ಪತ್ರಿಕೋದ್ಯಮದಲ್ಲಿ ಕನ್ನಡಪ್ರಭ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಪತ್ರಿಕೆ ಓದುವ ಹವ್ಯಾಸವನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದೇನೆ. ಸ್ಪರ್ಧಾತ್ಮಕತೆ ಮಧ್ಯೆಯೂ ಕನ್ನಡಪ್ರಭ ತನ್ನದೇ ಆದ ಛಾಪು ಉಳಿಸಿಕೊಂಡಿದೆ ಎಂದು ಬಣ್ಣಿಸಿದರು.ಕನ್ನಡಪ್ರಭ ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ ಅವರು ಸಚಿವ ಆರ್‌.ಬಿ.ತಿಮ್ಮಾಪುರ ಅವರನ್ನು ಸನ್ಮಾನಿಸಿ, ಗೌರವಿಸಿದರು. ಬಾಗಲಕೋಟೆ ಕನ್ನಡಪ್ರಭ ಜಿಲ್ಲಾ ವರದಿಗಾರ ಈಶ್ವರ ಶೆಟ್ಟರ್‌, ಜಾಹೀರಾತು ವ್ಯವಸ್ಥಾಪಕ ಸಂತೋಷ ಕರಿಕಟ್ಟಿ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.

ಈಚೆಗೆ ಮಾಧ್ಯಮದಲ್ಲಿ ಹಲವಾರು ಬದಲಾವಣೆ ಆಗಿದೆ. ಆರಂಭದಲ್ಲಿ ಪತ್ರಿಕೆಗಳು ಸುದ್ದಿಮೂಲವಾಗಿದ್ದವು. ನಂತರ ರೇಡಿಯೋ ಬಂತು. ನ್ಯೂಸ್‌ ಚಾಲನ್‌ಗಳು ಬಂದವು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ಸುದ್ದಿಗಳು ತಲುಪುತ್ತಿವೆ. ಆದರೂ ಇವುಗಳ ಮಧ್ಯೆ ಪತ್ರಿಕೆಗಳು ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ.

-ಆರ್‌.ಬಿ.ತಿಮ್ಮಾಪೂರ, ಅಬಕಾರಿ ಸಚಿವರು.