ಸಾರಾಂಶ
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ
ಉತ್ತರ ಕರ್ನಾಟಕ ಕುರಿತು ಸಮರ್ಪಕವಾಗಿ ಚರ್ಚೆ ನಡೆಯದ ಕಾರಣ ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರವು ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಉತ್ತರ ಕರ್ನಾಟಕ ಸಮಸ್ಯೆ ಕುರಿತು ಸಮರ್ಪಕವಾಗಿ ಚರ್ಚೆ ನಡೆಸಲು ಬಿಡದೆ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡದೆ ಇರುವ ಕಾರಣ ಅಧಿವೇಶನ ಅತೃಪ್ತಿ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಬಣ್ಣ ಹೊಡೆಯಲು 120 ಕೋಟಿ ರು. ಬೇಕಾ? ವಾಲ್ಮೀಕಿ, ಮುಡಾ ಹಗರಣ ಮತ್ತು ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ. ಹಗರಣಗಳ ಬಗ್ಗೆ ಚರ್ಚೆ ಮಾಡಲು ಎಷ್ಟೇ ಕೇಳಿದರೂ ಅವಕಾಶ ನೀಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಸರ್ಕಾರ ಗ್ಯಾರಂಟಿ ಬಿಟ್ಟು ಬೇರೆ ಮಾತನಾಡುತ್ತಿಲ್ಲ. ಗ್ಯಾರಂಟಿಗಳು ಶಾಶ್ವತವಾಗಿರುವುದಿಲ್ಲ. ಗ್ಯಾರಂಟಿ ಜಾರಿಗೆ ಮುನ್ನ ಜನ ಉಪವಾಸ ಇರಲಿಲ್ಲ. ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಮಾಡಬೇಕು. ಗ್ಯಾರಂಟಿಯಲ್ಲೇ ಸರ್ಕಾರ ಮುಗಿದರೆ ಹೇಗೆ? ರೈತರು, ನೀರಾವರಿ ಯೋಜನೆ ಮತ್ತು ಇತರೆ ಸಮಸ್ಯೆಗಳಿವೆ. ಅಭಿವೃದ್ಧಿಗಳಿಗಾಗಿ ಸರ್ಕಾರ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.