ಸಾರಾಂಶ
ಸುವರ್ಣ ವಿಧಾನಸಭೆ : ಬೆಂಗಳೂರು ನಗರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವಾಗ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾಕೆ ಮಾಡುತ್ತಿದ್ದೀರಿ? ಯಾರ ಪ್ರೇರಣೆಯಿಂದ ಮಾಡಲು ಹೊರಟಿದ್ದೀರಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ಉತ್ತರ ಕರ್ನಾಟಕ ಭಾಗದ ಚರ್ಚೆಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿ, ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಬದಲು ಬೆಳಗಾವಿ ಅಥವಾ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ ಎಂದು ಆಗ್ರಹಿಸಿದರು.ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆಗೆ 1870 ಎಕರೆ ಸ್ವಾಧೀನಕ್ಕೆ ನೋಟಿಸ್ ನೀಡಿ 16 ವರ್ಷವಾದರೂ ಏನೂ ಮಾಡಿಲ್ಲ.
ಅವರಿಗೆ ಬೆಳೆ ಬೆಳೆಯಲೂ ಅನುಮತಿ ನೀಡುತ್ತಿಲ್ಲ. ಸ್ವಾಧೀನವನ್ನೂ ಮಾಡಿಕೊಳ್ಳುತ್ತಿಲ್ಲ. ಬೀದರ್ ವಿಮಾನ ನಿಲ್ದಾಣ ಮುಚ್ಚಿದ್ದೀರಿ. ಇದೀಗ ಬೆಂಗಳೂರಿನಲ್ಲಿ ಮಾತ್ರ 2ನೇ ನಿಲ್ದಾಣಕ್ಕೆ ಮುಂದಾಗಿದ್ದೀರಿ ಎಂದು ಕಿಡಿಕಾರಿದರು.ಈ ವೇಳೆ ಮಧ್ಯೆ ಪ್ರವೇಶಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂದಿನ ಬೇಡಿಕೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗುತ್ತಿದೆ. 2035ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ 100 ದಶಲಕ್ಷ ಪ್ರಯಾಣಿಕರ ಒತ್ತಡ ಸೃಷ್ಟಿಯಾಗಲಿದೆ. 2033ರ ವೇಳೆಗೆ 85 ದಶಲಕ್ಷದಷ್ಟಾಗಲಿದೆ. ಈ ಒತ್ತಡ ತಗ್ಗಿಸಲು 2ನೇ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.